ಹೊಸದಿಗಂತ ವರದಿ,ಮಡಿಕೇರಿ:
ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗಾಳಿಬೀಡು ಸಮೀಪದ ವಣಚಲು ಗ್ರಾಮದಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಗ್ರಾಮದ ನಿವಾಸಿ ಅಪ್ಪಣ್ಣ (53) ಅವರನ್ನು ಅಣ್ಣ ಮಾಚಯ್ಯ (55) ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ಇವರಿಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿದ್ದು, ಈ ಸಂದರ್ಭ ಬಂದೂಕಿನಿಂದ ಗುಂಡು ಹಾರಿಸಿ ಅಪ್ಪಣರವರನ್ನು ಕೊಲೆ ಮಾಡಿದ ಮಾಚಯ್ಯ ಬಂದೂಕಿನೊಂದಿಗೆ ತಲೆಮರೆಸಿಕೊಂಡಿರುವುದಾಗಿ ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಡಿಕೇರಿ ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಯು.ಉಮೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ.
ದೂರುದಾರರು ನೀಡಿದ ಮಾಹಿತಿ ಅನ್ವಯ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ರಾಮರಾಜನ್ ಅವರು ತಿಳಿಸಿದ್ದಾರೆ.