ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಗ್ರೂಪ್ ಹಂತದ ಪಂದ್ಯ ಕ್ಷಿಪ್ರವಾಗಿ ಏಕಪಕ್ಷೀಯ ರೂಪ ಪಡೆದುಕೊಂಡಿತು. ಬಲಿಷ್ಠ ಪೈಪೋಟಿ ನಿರೀಕ್ಷಿಸಿದ್ದ ಕ್ರಿಕೆಟ್ ಪ್ರೇಕ್ಷಕರಿಗೆ ಈ ಮುಖಾಮುಖಿ ಆಸ್ಟ್ರೇಲಿಯಾದ ಸಂಪೂರ್ಣ ಪ್ರಾಬಲ್ಯವನ್ನು ತೋರಿಸಿತು. ಕೇವಲ 31 ಓವರ್‌ಗಳಲ್ಲಿ ಪಂದ್ಯ ಮುಕ್ತಾಯಗೊಂಡು, ಶ್ರೀಲಂಕಾ ತಂಡ ಸಂಪೂರ್ಣವಾಗಿ ಕುಸಿಯಿತು.
ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆದ ಗ್ರೂಪ್-ಎ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಮೂರನೇ ಓವರ್‌ಗೆ ತಂಡದ ಸ್ಕೋರ್ 3 ರನ್‌ಗಳಾಗಿದ್ದಾಗಲೇ ಎರಡು ವಿಕೆಟ್‌ಗಳು ಬಿದ್ದವು. ಚಾರ್ಲ್ಸ್ ಲೆಚ್ಮಂಡ್ ಆರಂಭಿಕ ಆಘಾತ ನೀಡಿದರೆ, ಬಳಿಕ ವೇಗಿ ವಿಲ್ ಬೈರೋಮ್ ಲಂಕಾ ಬ್ಯಾಟಿಂಗ್ ಕ್ರಮವನ್ನು ಚೂರಾಗಿಸಿದರು. ಬೈರೋಮ್ 6.5 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಪರಿಣಾಮ ಶ್ರೀಲಂಕಾ 58 ರನ್‌ಗಳಿಗೆ ಆಲೌಟ್ ಆಯಿತು. ಕವಿಜಾ ಗಮಗೆ (10) ಹಾಗೂ ಚಾಮಿಕಾ ಹೀನಾಟಿಗಲ (14) ಮಾತ್ರ ಎರಡು ಅಂಕಿ ತಲುಪಿದರು.
ಸಣ್ಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಒಂದು ವಿಕೆಟ್ ಕಳೆದುಕೊಂಡರೂ, ನಿತೇಶ್ ಸ್ಯಾಮ್ಯುಯೆಲ್ ಮತ್ತು ಸ್ಟೀವನ್ ಹೊಗನ್ ಜೋಡಿ ಯಾವುದೇ ಅಡಚಣೆ ಇಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿತು. 12 ಓವರ್‌ಗಳಲ್ಲಿ ಗುರಿ ತಲುಪಿದ ಆಸ್ಟ್ರೇಲಿಯಾ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.


