ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ. 14 ದಿನಗಳ ನೋಟಿಸ್ ನೀಡಿಲ್ಲ ಮತ್ತು ಜಗದೀಪ್ ಧನಕರ್ ಅವರ ಹೆಸರನ್ನು ಸರಿಯಾಗಿ ಬರೆಯಲಾಗಿಲ್ಲ ಎಂಬ ಕಾರಣಕ್ಕಾಗಿ ವಿಪಕ್ಷಗಳ ಮನವಿಯನ್ನು ತಿರಸ್ಕರಿಸಲಾಗಿದೆ.
ರಾಜ್ಯಸಭಾ ಉಪಾಧ್ಯಕ್ಷರು ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದಾರೆ. ಅವಿಶ್ವಾಸ ನಿರ್ಣಯದ ತಿರಸ್ಕಾರಕ್ಕೆ ಕಾರಣಗಳನ್ನು ತಿಳಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್, ಅಂತಹ ಪ್ರಸ್ತಾವನೆಯನ್ನು ಸಲ್ಲಿಸಲು ಕಡ್ಡಾಯವಾಗಿರುವ 14 ದಿನಗಳ ನೋಟಿಸ್ ನೀಡಲಾಗಿಲ್ಲ ಎಂದು ಹೇಳಿದರು. ಹಾಗೇ, ಜಗದೀಪ್ ಧನಕರ್ ಅವರ ಹೆಸರನ್ನು ಸಹ ಸರಿಯಾಗಿ ಬರೆದಿಲ್ಲ ಎಂದು ಅವರು ಹೇಳಿದರು.
ಜಗದೀಪ್ ಧನಕರ್ ಅವರನ್ನು ಸರ್ಕಾರದ ಅತಿದೊಡ್ಡ ವಕ್ತಾರ ಎಂದು ಟೀಕಿಸಿದ್ದ ವಿರೋಧ ಪಕ್ಷಗಳು ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ರಾಜ್ಯಸಭೆಯ ಕಲಾಪಗಳಿಗೆ ಅಡ್ಡಿಯಾಗಿದ್ದಾರೆ. ಜಗದೀಪ್ ಧನಕರ್ ಅವರ ಕ್ರಮಗಳು ಭಾರತದ ಘನತೆಗೆ ಧಕ್ಕೆ ತಂದಿವೆ ಎಂದು ಆರೋಪಿಸಲಾಗಿತ್ತು.
ಸಂವಿಧಾನದ ಪರಿಚ್ಛೇದ 67(ಬಿ) ಅಡಿಯಲ್ಲಿ ಸಲ್ಲಿಸಲಾದ ಈ ಪ್ರಸ್ತಾವನೆಯನ್ನು ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಸಹ ಬೆಂಬಲಿಸಿದ್ದವು.