ಸುವರ್ಣಸೌಧದಲ್ಲಿ ಭದ್ರತಾ ಲೋಪ: ಸಿಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಬೆಂಬಲಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಸಂವಿಧಾನಿಕ ಪದ ಬಳಕೆಮಾಡಿದ್ದಾರೆ ಎಂದು ಆರೋಪಿಸಿ ಸುವರ್ಣಸೌಧದ ಪೂರ್ವ ಕಾರಿಡಾರ್​ನಲ್ಲಿ ಸಚಿವೆಯ ಬೆಂಬಲಿಗರು ಇಂದು ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರಿಗೆ ಮುತ್ತಿಗೆ ಹಾಕಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.

ಸಿ.ಟಿ.ರವಿ ವಿಧಾನಸಭೆ ಲಾಂಜ್​ನಿಂದ ತೆರಳುತ್ತಿರುವಾಗ ಮುತ್ತಿಗೆ ಹಾಕಿದ ಬೆಂಬಲಿಗರು, ಅವಾಚ್ಯ ಪದಗಳಿಂದ ಬಯ್ಯಲು ಆರಂಭಿಸಿದರು. ಸುಮಾರು 30ಕ್ಕೂ ಅಧಿಕ ಮಂದಿ ಲಾಂಜ್ ಕಡೆ ನುಗ್ಗಿ ಹಲ್ಲೆಗೂ ಯತ್ನಿಸಿದರು. ಕೂಡಲೇ ಮಾರ್ಷಲ್​ಗಳು ಮಧ್ಯಪ್ರವೇಶಿಸಿ ಸಿ.ಟಿ.ರವಿಯನ್ನು ಒಳಕರೆತಂದು, ಕಾರಿಡಾರ್ ಗೇಟ್ ಹಾಕಿದರು.

ಈ ವೇಳೆ ಬೆಂಬಲಿಗರು ಸಿ.ಟಿ.ರವಿ ಮೇಲೆ ಅವಾಚ್ಯ ಪದ ಬಳಸಿ, ಹೊರಬಿಡುವಂತೆ ಆಗ್ರಹಿಸಿದರು. ಧಿಕ್ಕಾರ ಕೂಗಿದರು. ಇದನ್ನು ಮಾರ್ಷಲ್​ಗಳು ಅಸಹಾಯಕರಾಗಿ ವೀಕ್ಷಿಸುತ್ತಿದ್ದರು.‌ ಈ ಬೆಳವಣಿಗೆಯಿಂದ ಕೋಪಗೊಂಡ ಸಿ.ಟಿ.ರವಿ ಕಾರಿಡಾರ್​ನಲ್ಲೇ ಧರಣಿ ಕುಳಿತರು. ‘ಗೂಂಡಾಗಳನ್ನು ಹೇಗೆ ಒಳಕ್ಕೆ ಬಿಟ್ಟಿದ್ದೀರಿ?. ನಾನು ಇಲ್ಲಿಂದ ಹೋಗಲ್ಲ. ನಾನು ಹೆದರುವುದಿಲ್ಲ’ ಎಂದು ಮಾರ್ಷಲ್​ಗಳು, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.

ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕರು ಆಗಮಿಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಗೂಂಡಾಗಳನ್ನು ಕೂಡಲೇ ಬಂಧಿಸಿ.‌ ಎಂಎಲ್​ಸಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಗೂಂಡಾಗಳನ್ನು ಸುವರ್ಣಸೌಧದ ಕಾರಿಡಾರ್​ ಬಳಿ ಹೇಗೆ ಬಿಟ್ಟಿದ್ದೀರಿ’ ಎಂದು ಪ್ರಶ್ನಿಸಿದರು.

ಸುವರ್ಣಸೌಧದಲ್ಲಿ ಭದ್ರತಾ ಲೋಪ:
ಅಧಿವೇಶನ ನಡೆಯುತ್ತಿರುವಾಗ ಸುಮಾರು 50ಕ್ಕೂ ಅಧಿಕ ಸಚಿವೆಯ ಬೆಂಬಲಿಗರು ಸುವರ್ಣಸೌಧದ ಕಾರಿಡಾರ್‌ಗೆ ನುಗ್ಗುವ ಮೂಲಕ ಭದ್ರತಾ ಲೋಪವಾಗಿದೆ.‌ ಕಾರಿಡಾರ್‌ನಲ್ಲಿ ದಾಂಧಲೆ ಆಗುತ್ತಿದ್ದರೂ ಮೊದಲಿಗೆ ಮಾರ್ಷಲ್‌ಗಳೇ ಪರಿಸ್ಥಿಯನ್ನು ನಿಭಾಯಿಸಿದರು. ಸುಮಾರು ಅರ್ಧ ತಾಸಿನ‌ ಬಳಿಕ ಪೊಲೀಸರು ಆಗಮಿಸಿ ಬೆಂಬಲಿಗರನ್ನು ಹೊರಕರೆದುಕೊಂಡು ಹೋಗಿದ್ದಾರೆ.‌ ದಾಂಧಲೆ ನಡೆದು ಅರ್ಧ ತಾಸು ಕಳೆದರೂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿರಲಿಲ್ಲ. ಬಳಿಕ ಎಡಿಜಿಪಿ ಹಿತೇಂದ್ರ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಬಿಜೆಪಿ ಶಾಸಕರು, “ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಸದನ ನಡೆಯುತ್ತಿರುವಾಗಲೇ ಪೂರ್ವ ಕಾರಿಡಾರ್​ಗೆ ಇಷ್ಟೊಂದು ಜನ ಆಗಮಿಸಿರುವುದು ಭದ್ರತಾ ವೈಫಲ್ಯ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!