ರಾಹುಲ್ ಗಾಂಧಿ ತನ್ನೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ: ಗಂಭೀರ ಆರೋಪ ಮಾಡಿದ ಬಿಜೆಪಿ ಸಂಸದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನ ಆವರಣದಲ್ಲಿ ರಾಹುಲ್ ಗಾಂಧಿ ತನ್ನ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದು, ತನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿಯ ಮಹಿಳಾ ಸಂಸದೆ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯಸಭಾ ಅಧ್ಯಕ್ಷರಿಗೆ ದೂರನ್ನೂ ನೀಡಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನ ಆವರಣದಲ್ಲಿ ತನ್ನೊಂದಿಗೆ ಅನುಚಿತ ವರ್ತನೆ ಮಾಡಿದ್ದಾರೆ ಎಂದು ನಾಗಾಲ್ಯಾಂಡ್‌ನ ಬಿಜೆಪಿ ಸಂಸದೆ ಫಾಂಗ್ನಾನ್ ಕೊನ್ಯಾಕ್ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಇಬ್ಬರು ಬಿಜೆಪಿಯ ಸಂಸದರಿಗೆ ಗಾಯಗಳನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿದ ವರದಿಗಳು ಹೊರಬಂದ ಕೆಲವೇ ಗಂಟೆಗಳ ನಂತರ ಈ ಆರೋಪ ಕೇಳಿಬಂದಿದೆ.

ನಾಗಾಲ್ಯಾಂಡ್‌ನಿಂದ ರಾಜ್ಯಸಭೆಗೆ ಚುನಾಯಿತರಾದ ಮೊದಲ ಮಹಿಳೆ ಫಾಂಗ್ನಾನ್ ಕೊನ್ಯಾಕ್, ರಾಹುಲ್ ಗಾಂಧಿ ಅವರು ಸಂಸತ್ತಿನ ಪ್ರವೇಶದ್ವಾರದ ಬಳಿ ನನ್ನ ಬಳಿ ಬಂದು, ಜಗಳವಾಡಿದ್ದಾರೆ. ಈ ವೇಳೆ ಮೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆ. ಇದರಿಂದ ನನಗೆ ಮುಜುಗರವಾಗಿದೆ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ಸಂಸತ್ ಭವನದ ಮಕರ ದ್ವಾರದ ಮೆಟ್ಟಿಲುಗಳ ಬಳಿ ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರಕ್ಕೆ ಮಾರ್ಗವನ್ನು ರಚಿಸಿದಾಗ ತಾನು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ ಎಂದು ನಾಗಾಲ್ಯಾಂಡ್ ಸಂಸದೆ ಹೇಳಿದ್ದಾರೆ. ಆಗ ಇದ್ದಕ್ಕಿದ್ದಂತೆ, ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಪಕ್ಷದ ಸದಸ್ಯರು ನನ್ನ ಮುಂದೆ ಬಂದರು. ಅವರಿಗಾಗಿ ಒಂದು ಮಾರ್ಗವನ್ನು ರಚಿಸಲಾಗಿದ್ದರೂ ಬೇಕೆಂದೇ ನನ್ನೆದುರು ಬಂದು ಅನುಚಿತವಾಗಿ ವರ್ತಿಸಿದರು ಎಂದು ದೂರಿನಲ್ಲಿ ಬರೆದಿದ್ದಾರೆ.

ನಾನು ಒಬ್ಬ ಮಹಿಳಾ ಸದಸ್ಯನಾಗಿದ್ದು, ಈ ಘಟನೆಯಿಂದ ತುಂಬಾ ಅಹಿತಕರವಾದ ಹಾಗೂ ಭಾರವಾದ ಹೃದಯದಿಂದ ದೂರ ಸರಿದಿದ್ದೇನೆ. ಮತ್ತು ನನ್ನ ಪ್ರಜಾಪ್ರಭುತ್ವ ಹಕ್ಕಿನ ಮೂಲಕ ಅವರನ್ನು ಖಂಡಿಸುತ್ತೇನೆ. ಪರಿಶಿಷ್ಟ ಜಾತಿ (ಎಸ್​ಟಿ) ಗೆ ಸೇರಿದ ನಾನು ಅನುಭವಿಸಿದನ್ನು, ಯಾವುದೇ ಸಂಸದರುಅನುಭವಿಸಬಾರದು, “ಆದ್ದರಿಂದ, ಗೌರವಾನ್ವಿತ ಅಧ್ಯಕ್ಷರೆ, ನಾನು ನಿಮ್ಮ ರಕ್ಷಣೆಯನ್ನು ಕೋರುತ್ತೇನೆ” ಎಂದು ಅವರು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!