ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಸಾರಿಗೆ ಇಲಾಖೆ ಹಾಗೂ ಬೈಕ್ ಟ್ಯಾಕ್ಸಿ ಕಂಪನಿಗಳ ನಡುವೆ ನಡೆಯುತ್ತಿದ್ದ ಸುದೀರ್ಘ ಕಾನೂನು ಹೋರಾಟಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ತಿರುವು ನೀಡಿದೆ. ಬೈಕ್ ಟ್ಯಾಕ್ಸಿಗಳಿಗೆ ಪರವಾನಗಿ ನೀಡಲು ಹಿಂದೇಟು ಹಾಕುತ್ತಿದ್ದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ನಿಯಮಾನುಸಾರ ಪರವಾನಗಿ ನೀಡುವಂತೆ ಸ್ಪಷ್ಟ ಆದೇಶ ಹೊರಡಿಸಿದೆ.
ಈ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಓಲಾ ಕನ್ಸ್ಯೂಮರ್ ಸಂಸ್ಥೆಯ ವಕ್ತಾರರು, ಇದೊಂದು ನಾಗರಿಕ ಸ್ನೇಹಿ ನಿರ್ಧಾರ ಎಂದು ಬಣ್ಣಿಸಿದ್ದಾರೆ.
“ಮಾನ್ಯ ಕರ್ನಾಟಕ ಹೈಕೋರ್ಟ್‌ನ ನಿರ್ಧಾರವು ಸ್ವಾಗತಾರ್ಹವಾಗಿದ್ದು, ಇದು ಕರ್ನಾಟಕದ ನಗರ ಸಾರಿಗೆ ವ್ಯವಸ್ಥೆಗೆ ಸಿಕ್ಕ ಮಹತ್ವದ ಜಯವಾಗಿದೆ. ಅತಿಯಾದ ಸಂಚಾರ ದಟ್ಟಣೆ ಹೊಂದಿರುವ ನಗರಗಳಿಗೆ ಬೈಕ್ ಟ್ಯಾಕ್ಸಿಗಳು ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿವೆ. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಕೊನೆಯ ಹಂತದ ಸಂಪರ್ಕವನ್ನು ಕಲ್ಪಿಸುವಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ. ಈ ನಿರ್ಧಾರದಿಂದಾಗಿ ನಗರದ ಸಂಚಾರ ದಟ್ಟಣೆ ಕಡಿಮೆಯಾಗುವುದಲ್ಲದೆ, ಸಾವಿರಾರು ಜನರಿಗೆ ಸುಲಭವಾಗಿ ಆದಾಯ ಗಳಿಸುವ ಅವಕಾಶಗಳು ಸೃಷ್ಟಿಯಾಗಲಿವೆ. ಕರ್ನಾಟಕದ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಬೈಕ್ ಟ್ಯಾಕ್ಸಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಅದರ ಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸಲು ನಾವು ಬದ್ಧರಾಗಿದ್ದೇವೆ.” ಎಂದು ಓಲಾ ಸಂಸ್ಥೆ ತಿಳಿಸಿದೆ


