ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಮೊದಲ ಪಂದ್ಯವನ್ನು 41 ರನ್‌ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿಯಲ್ಲಿ 1–0 ಮುನ್ನಡೆ ಹೊಂದಿದ್ದು, ಈ ಪಂದ್ಯದಲ್ಲೂ ಗೆಲುವಿನ ಹಾದಿ ಮುಂದುವರೆಸುವ ಗುರಿಯಲ್ಲಿದೆ.
ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಎರಡು ಬದಲಾವಣೆಗಳಿದ್ದು, ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್‌ಗೆ ವಿಶ್ರಾಂತಿ ನೀಡಲಾಗಿದೆ. ಜೊತೆಗೆ ನ್ಯೂಜಿಲೆಂಡ್ ತಂಡದಲ್ಲೂ ಮೂರು ಬದಲಾವಣೆಗಳಾಗಿವೆ.
ಹೆಡ್ ಟು ಹೆಡ್ ದಾಖಲೆಯನ್ನು ನೋಡಿದರೆ, ಉಭಯ ತಂಡಗಳು ಇದುವರೆಗೆ 26 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 15 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯ ಡ್ರಾ ಆಗಿದೆ. ಭಾರತದಲ್ಲಿ ನಡೆದ 12 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಎಂಟರಲ್ಲಿ ಗೆಲುವು ಕಂಡಿದೆ.


