Saturday, January 24, 2026
Saturday, January 24, 2026
spot_img

Pre-Workout Meal | ವರ್ಕೌಟ್‌ಗೆ ಮೊದಲು ಏನ್ ತಿನ್ಬಹುದು? ಏನ್ ತಿನ್ಬಾರ್ದು?

ಜಿಮ್‌ಗೆ ಹೋಗುವ ಮೊದಲು ಅಥವಾ ಬೆಳಗಿನ ವ್ಯಾಯಾಮಕ್ಕೆ ಸಿದ್ಧರಾಗುವಾಗ, ನಾವು ಧರಿಸುವ ಶೂ ಅಥವಾ ಹಿಡಿಯುವ ಡಂಬೆಲ್‌ಗಳಷ್ಟು ಮುಖ್ಯವಾದುದು ನಮ್ಮ ಪ್ಲೇಟ್‌. ಸರಿಯಾದ ಪ್ರೀ ವರ್ಕೌಟ್ ಮೀಲ್ ದೇಹಕ್ಕೆ ಬೇಕಾದ ಶಕ್ತಿ ನೀಡುತ್ತದೆ, ತಾಳ್ಮೆ ಹೆಚ್ಚಿಸುತ್ತದೆ ಮತ್ತು ವರ್ಕೌಟ್‌ ಬಳಿಕದ ದಣಿವನ್ನು ಕಡಿಮೆ ಮಾಡುತ್ತದೆ. ಆದರೆ ತಪ್ಪು ಆಹಾರ ಆಯ್ಕೆ ಮಾಡಿದರೆ ವ್ಯಾಯಾಮದ ಮಧ್ಯೆ ತಲೆಸುತ್ತು, ಸುಸ್ತು ಅಥವಾ ಹೊಟ್ಟೆ ತೊಂದರೆ ಎದುರಾಗಬಹುದು. ಹಾಗಾದರೆ, ಪ್ರೀ ವರ್ಕೌಟ್ ಸಮಯದಲ್ಲಿ ಏನು ತಿನ್ನುವುದು ಒಳಿತು? ಏನು ತಿನ್ನದೇ ಇರೋದು ಒಳ್ಳೆದು? ನೋಡೋಣ.

ಪ್ರೀ ವರ್ಕೌಟ್‌ನಲ್ಲಿ ತಿನ್ನಬಹುದಾದ ಆಹಾರಗಳು

ವರ್ಕೌಟ್‌ಗೆ ಮೊದಲು ದೇಹಕ್ಕೆ ತ್ವರಿತ ಶಕ್ತಿ ಬೇಕಾಗುತ್ತದೆ. ಇದಕ್ಕಾಗಿ ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳು ಮತ್ತು ಸ್ವಲ್ಪ ಪ್ರಮಾಣದ ಪ್ರೋಟೀನ್‌ ಉತ್ತಮ. ಬಾಳೆಹಣ್ಣು, ಸೇಬು, ಓಟ್ಸ್, ಬ್ರೌನ್ ಬ್ರೆಡ್, ಇಡ್ಲಿ ಅಥವಾ ಪೊಹಾ ಹೀಗೆ ಲಘು ಆಹಾರಗಳು ಶಕ್ತಿಯನ್ನು ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಮೊಸರು, ಕಡಿಮೆ ಕೊಬ್ಬಿನ ಹಾಲು ಅಥವಾ ಬೇಳೆಗಳಿಂದ ಪಡೆದ ಪ್ರೋಟೀನ್‌ಗಳು ಸ್ನಾಯುಗಳಿಗೆ ಸಹಾಯ ಮಾಡುತ್ತವೆ. ವರ್ಕೌಟ್‌ಗೆ ಸುಮಾರು 30–60 ನಿಮಿಷಗಳ ಮೊದಲು ಇವುಗಳನ್ನು ತೆಗೆದುಕೊಳ್ಳುವುದು ಉತ್ತಮ.

ಪ್ರೀ ವರ್ಕೌಟ್‌ನಲ್ಲಿ ತಪ್ಪಿಸಬೇಕಾದ ಆಹಾರಗಳು

ಅತಿ ಎಣ್ಣೆ ಆಹಾರ, ಕರಿದ ಪದಾರ್ಥಗಳು, ಜಾಸ್ತಿ ಸಕ್ಕರೆ ಇರುವ ಸಿಹಿತಿಂಡಿಗಳು ಹಾಗೂ ಭಾರಿ ಊಟಗಳನ್ನು ವರ್ಕೌಟ್‌ಗೂ ಮೊದಲು ತಪ್ಪಿಸಬೇಕು. ಇವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಹೊಟ್ಟೆ ಭಾರ, ಅಸಹಜತೆ ಉಂಟುಮಾಡುತ್ತವೆ. ಸಾಫ್ಟ್ ಡ್ರಿಂಕ್ಸ್, ಅತಿ ಹೆಚ್ಚು ಕ್ಯಾಫಿನ್ ಅಥವಾ ಮದ್ಯಪಾನವೂ ದೇಹವನ್ನು ಡಿಹೈಡ್ರೇಟ್ ಮಾಡಬಹುದು.

ಸಮಯ ಮತ್ತು ಪ್ರಮಾಣಕ್ಕೂ ಮಹತ್ವ

ಪ್ರೀ ವರ್ಕೌಟ್ ಮೀಲ್ ಎಂದರೆ ತುಂಬಾ ತಿನ್ನಬೇಕೆಂದಲ್ಲ. ಲಘು, ಸಮತೋಲನ ಆಹಾರ ಸಾಕು. ನಿಮ್ಮ ವ್ಯಾಯಾಮದ ತೀವ್ರತೆ, ಸಮಯ ಮತ್ತು ದೇಹದ ಅಗತ್ಯಕ್ಕೆ ತಕ್ಕಂತೆ ಆಹಾರ ಆಯ್ಕೆ ಮಾಡಿದರೆ, ವರ್ಕೌಟ್ ಹೆಚ್ಚು ಪರಿಣಾಮಕಾರಿಯಾಗಿ ರೂಪಾಂತರಗೊಳ್ಳುತ್ತದೆ.

Must Read