12 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಸಲು ಉತ್ತರ ಪ್ರದೇಶ ಸಜ್ಜಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಮಹಾ ಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭಮೇಳವನ್ನು ಯಶಸ್ವಿಯಾಗಿ ಆಯೋಜಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ನಾಲ್ಕು ತಾಲೂಕುಗಳನ್ನು ಒಳಗೊಂಡ ‘ಮಹಾಕುಂಭ ನಗರವನ್ನು’ ಹೊಸ ಜಿಲ್ಲೆಯಾಗಿ ಘೋಷಿಸಿದೆ. ಈ ಬಾರಿ 2025ರ ಜ.14ರಿಂದ ಫೆ.26ರವರೆಗೆ ಮಹಾ ಕುಂಭಮೇಳ ನಡೆಯಲಿದೆ.
ಮಹಾ ಕುಂಭಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಕೃತಕ ಬುದ್ಧಿಮತ್ತೆ (ಎಐ) ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ. ಬಹುತೇಕ ಯಾತ್ರಿಕರು ಮುಂಜಾನೆ 3ರಿಂದ ಬೆಳಗ್ಗೆ 7ರವರೆಗೆ ತೀರ್ಥಸ್ನಾನಕ್ಕೆ ತೆರಳುತ್ತಾರೆ. ಹೀಗಾಗಿ ಎಐ ಆಧಾರಿತ ಸಿಸಿ ಕ್ಯಾಮೆರಾಗಳು ಇದೇ ಸಮಯದಲ್ಲಿ ಭಕ್ತರ ಲೆಕ್ಕ ಹಾಕಿ ಪ್ರತಿ ನಿಮಿಷಕ್ಕೊಮ್ಮೆ ಪರಿಷ್ಕೃತ ಮಾಹಿತಿಯನ್ನು ಒದಗಿಸಲಿದೆ. 95% ನಿಖರತೆಯನ್ನು ಇದು ಸಾಧಿಸಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಗ್‌ರಾಜ್‌ನ 200 ಸ್ಥಳಗಳಲ್ಲಿ 744 ತಾತ್ಕಾಲಿಕ ಹಾಗೂ 268 ಕಡೆಗಳಲ್ಲಿ 1107 ಶಾಶ್ವತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ 100ಕ್ಕೂ ಹೆಚ್ಚು ಪಾರ್ಕಿಂಗ್ ಜಾಗಗಳಲ್ಲಿ 720 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಿದ್ದು, ಸುಗಮ ಸಂಚಾರಕ್ಕೆ ಹಾಗೂ ಜನದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಮಾಹಿತಿ ನೀಡಿದ್ದಾರೆ.
ಮಹಾ ಕುಂಭಮೇಳಕ್ಕಾಗಿ ವಿಶೇಷ ನ್ಯಾವಿಗೇಷನ್ ಸಿಸ್ಟಮ್ ಅನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ತಾತ್ಕಾಲಿಕ ನಗರಕ್ಕೆ ನ್ಯಾವಿಗೇಷನ್ ಸಿಸ್ಟಮ್ ಅನ್ನು ರಚಿಸುತ್ತಿರುವುದು ಇದೇ ಮೊದಲು. ಇದು ಪ್ರವಾಸಿಗರಿಗೆ ಅಥವಾ ಭಕ್ತರಿಗೆ ಪ್ರಮುಖ ರಸ್ತೆಗಳು, ಧಾರ್ಮಿಕ ಸ್ಥಳಗಳು, ಘಾಟ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ಯಾತ್ರಾರ್ಥಿಗಳ ಸಂಚಾರಕ್ಕೆ ಅನುವಾಗಲು ಹಾಗೂ ಪರಿಸರಸ್ನೇಹಿ ಪ್ರಯಾಣ ಖಚಿತಕ್ಕಾಗಿ ಆ್ಯಪ್ ಆಧಾರಿತ ಇ-ರಿಕ್ಷಾ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ. ಯಾತ್ರಾರ್ಥಿಗಳಿಗಾಗಿ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ವಿಲ್ಲಾ, ಮಹಾರಾಜ, ಸ್ವಿಜ್ ಕಾಟೇಜ್, ಡಾರ್ಮೆಟ್ರಿ ಎಂಬ 4 ವಿಧಗಳ ಟೆಂಟ್ ಇರಲಿದ್ದು, ಐಷಾರಾಮಿ ಸೇವೆಯ 2000 ಸ್ವಿಜ್ ಕಾಟೇಜ್‌ಗಳನ್ನೂ ನಿರ್ಮಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಭಾರತ ತಂತ್ರಜ್ಞಾನದಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಕುಂಭಮೇಳಕ್ಕೂ ವಿಸ್ತರಿಸಿದೆ. ಪ್ರಯಾಣಿಕರಿಗೆ ನೆರವು ನೀಡುವುದಕ್ಕಾಗಿ ಕೃತಕ ಬುದ್ಧಿಮತ್ತೆ ಚಾಟ್‌ಬಾಟನ್ನು ಸ್ಥಾಪನೆ ಮಾಡಿದೆ. ಈ ಚಾಟ್‌ಬಾಟ್ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಇದೊಂದು ಆ್ಯಪ್ ಆಗಿದ್ದು, ‘ಓಲಾ ಕೃತಿಮ್’ ಇದನ್ನು ತಯಾರು ಮಾಡಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಮಲಯಾಳ, ಉರ್ದು, ಗುಜರಾತಿ, ಪಂಜಾಬಿ ಮತ್ತು ಬೆಂಗಾಲಿಗಳಲ್ಲಿ ಇದು ಮಾಹಿತಿ ಒದಗಿಸಲಿದೆ. ಅಲ್ಲದೇ ಇಡೀ ಕುಂಭಮೇಳದ ಮ್ಯಾಪ್ ಒದಗಿಸಲಿದ್ದು, ಕುಂಭಮೇಳದ ಇತಿಹಾಸ, ಪದ್ಧತಿ ಸೇರಿದಂತೆ ಹಲವು ಮಾಹಿತಿಯನ್ನು ಒದಗಿಸಲಿದೆ.