ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಸಂಸತ್ ಭವನದ ಬಳಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕೂಡಲೇ ಸ್ಥಳೀಯ ಹಾಗೂ ರೈಲ್ವೆ ಪೊಲೀಸರು ಕೆಲ ನಾಗರಿಕರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಆ ವ್ಯಕ್ತಿಗೆ ಶೇ.95ರಷ್ಟು ಸುಟ್ಟ ಗಾಯಗಳಾಗಿವೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಕಟ್ಟಡದ ಬಳಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತನ ಬಳಿಯಿಂದ ಭಾಗಶಃ ಸುಟ್ಟು ಹೋಗಿರುವ 2 ಪುಟಗಳ ಪತ್ರವೊಂದನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
‘ಜಿತೇಂದ್ರ ಅವರ ದೇಹದ ಮೇಲೆ ಶೇಕಡಾ 95 ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ಬರ್ನ್ಸ್ ಐಸಿಯುನಲ್ಲಿ ಪ್ರತ್ಯೇಕ ಹಾಸಿಗೆಯಲ್ಲಿ ಇರಿಸಲಾಗಿದೆ. ಪ್ರಸ್ತುತ, ವೈದ್ಯರ ತಂಡ ಅವರಿಗೆ ಚಿಕಿತ್ಸೆ ಕೊಡಿಸುತ್ತಿದೆ’ ಎಂದು ಆಸ್ಪತ್ರೆ ತಿಳಿಸಿದೆ.
ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ಎಂದು ಗುರುತಿಸಲಾದ ವ್ಯಕ್ತಿ, ರೈಲ್ವೆ ಭವನದ ಬಳಿಯ ಉದ್ಯಾನವನದಲ್ಲಿ ಬೆಂಕಿ ಹಚ್ಚಿಕೊಂಡು ನಂತರ ಸಂಸತ್ ಭವನದ ಕಡೆಗೆ ಓಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.