ಹೊಸ ದಿಗಂತ ವರದಿ, ತುಮಕೂರು:
ಆನ್‌ಲೈನ್ ಮೂಲಕ ಚಿನ್ನ ಖರೀದಿಸಿ, ಮಾರಾಟ ಮಾಡಿ ಉತ್ತಮ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾದ ಉದ್ಯಮಿಯೊಬ್ಬರು 1.26 ಕೋಟಿ ಕಳೆದುಕೊಂಡಿರುವುದು ನಗರದಲ್ಲಿ ನಡೆದಿದೆ. ಮೋಸ ಹೋಗಿರುವುದು ಅರಿವಿಗೆ ಬಂದ ನಂತರ ಉದ್ಯಮಿ, ಪೊಲೀಸರ ಮೊರೆ ಹೋಗಿದ್ದು ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಶಿರಾ ಗೇಟ್ ನಿವಾಸಿ ಎನ್. ಪ್ರಫುಲ್ ವಂಚಕರ ಜಾಲಕ್ಕೆ ಒಳಗಾಗಿ ಹಣ ಕಳೆದುಕೊಂಡ ಉದ್ಯಮಿ. ವಂಚಕರು ಪ್ರಫುಲ್ ಅವರ ತಂದೆಯ ಮೊಬೈಲ್ ನಂಬರ್ ಅನ್ನು ವಿಐಪಿ-03, ಈಗಲ್ 500 ಗೋಲ್ಡ್ ಟ್ರೇಡಿಂಗ್ ಕ್ಲಬ್ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಇದನ್ನು ಗಮನಿಸಿದ ಪ್ರಫುಲ್ ವ್ಯಾಪಾರಕ್ಕೆ ಉಪಯೋಗವಾಗುತ್ತದೆ ಎಂದು ತಾವು ಕೂಡ ಅದೇ ಗ್ರೂಪ್‌ಗೆ ಸೇರಿದ್ದಾರೆ.
ಆಗ ವಂಚಕರು ಈ ಗ್ರೂಪ್‌ನಲ್ಲಿ ಹಣ ಹೂಡಿಕೆ ಮತ್ತು ಕಮಿಷನ್ ಪಡೆದ ಬಗ್ಗೆ ತುಂಬಾ ಜನ ಮೆಸೇಜ್ ಮಾಡಿದ್ದಾರೆ. ಕಮಿಷನ್ ಪಡೆದ ಚಿತ್ರಗಳ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದ ಪ್ರಫುಲ್ ಹಣ ಹೂಡಲು ನಿರ್ಧರಿಸಿ ಗ್ರೂಪ್‌ನಲ್ಲಿದ್ದ dotgold.co ವೆಬ್‌ಸೈಟ್ ಕ್ಲಿಕ್ ಮಾಡಿ ಹೊಸದಾಗಿ ಖಾತೆ ತೆರೆದಿದ್ದಾರೆ. ನಂತರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ತಿಳಿಸಿದ ವಿವಿಧ ಖಾತೆಗಳಿಗೆ ಹಣ ಹಾಕಿದ್ದು, ಅವರ ವೆಬ್‌ಸೈಟ್ ಖಾತೆಗೆ ಹಣ ಜಮಾ ಆಗಿದೆ ಎಂದು ತೋರಿಸಿದೆ. ನಂತರ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.
ಇದನ್ನು ನಂಬಿದ ಪ್ರಫುಲ್ ಹಂತ ಹಂತವಾಗಿ ಒಟ್ಟು 1.26 ಕೋಟಿ ಹಣ ವರ್ಗಾಯಿಸಿದ್ದರು. ನಂತರ ವಂಚಕರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿರುವ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹೀಗಾಗಿ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.