ಇಂಡೋ -ಪಾಕ್‌ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಮನಮೋಹನ್‌ ಸಿಂಗ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮನಮೋಹನ್‌ ಸಿಂಗ್‌ ಭಾರತ ಮತ್ತು ಪಾಕ್‌ ಜೊತೆ ಕ್ರಿಕೆಟ್‌ ನಂಟು ಆರಂಭಿಸಿದ್ದು ಮಾತ್ರವಲ್ಲದೇ ಪಾಕ್‌ ಪ್ರಧಾನಿ ಜೊತೆ ಕುಳಿತು ಎರಡು ದೇಶಗಳ ನಡುವಿನ ಪಂದ್ಯ ಸಹ ವೀಕ್ಷಿಸಿದ್ದರು.

ಭಾರತ ಪಾಕಿಸ್ತಾನ ಕ್ರಿಕೆಟ್‌ ಮ್ಯಾಚ್‌ ಅಂದರೆ ಎರಡೂ ದೇಶಗಳ ಅಭಿಮಾನಿಗಳಿಗೆ ಭಾವನಾತ್ಮಕ ವಿಚಾರ. ಈಗ ಕೇವಲ ಐಸಿಸಿ, ಏಷ್ಯಾ ಕಪ್‌ನಲ್ಲಿ ಮಾತ್ರ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಎರಡು ದೇಶಗಳ ಕ್ರಿಕೆಟ್‌ ಸಂಬಂಧ ಸುಧಾರಣೆಯಾಗಿತ್ತು.

2008ರ ಮುಂಬೈ ದಾಳಿ  ಬಳಿಕ ಭಾರತ-ಪಾಕ್ ಕ್ರಿಕೆಟ್ ಸಂಬಂಧ ಬಹಳ ಹಳಸಿತ್ತು. ಈಗ ಹೇಗೆ ವಿರೋಧ ವ್ಯಕ್ತವಾಗಿತ್ತೋ ಆ ಸಮಯದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಎರಡು ದೇಶಗಳ ಮಧ್ಯೆ ಹಳಸಿದ್ದ ಕ್ರಿಕೆಟ್‌ ಸಂಬಂಧಕ್ಕೆ ಮನಮೋಹನ್‌ ಸಿಂಗ್ ಅವಧಿಯಲ್ಲಿ ಚಾಲನೆ ಸಿಕ್ಕಿತ್ತು.

2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಆಯೋಜಿಸಿತ್ತು. ಪಾಕ್‌ ತಂಡ ಲೀಗ್‌ ಮತ್ತು ಕ್ವಾರ್ಟರ್‌ ಫೈನಲ್‌ ಪಂದ್ಯಗಳನ್ನು ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಆಡಿದ್ದರೂ ಭಾರತದ ವಿರುದ್ಧದ ಸೆಮಿಫೈನಲ್‌ ಪಂದ್ಯ ಆಡಲು ಭಾರತಕ್ಕೆ ಬರಲೇಬೇಕಿತ್ತು.

ಈ ಸಂದರ್ಭದಲ್ಲಿ ಮನಮೋಹನ್‌ ಸಿಂಗ್‌ ಅವರು ಪಾಕ್‌ ಪ್ರಧಾನಿ ಯೂಸುಫ್‌ ಗಿಲಾನಿ  ಅವರಿಗೆ ಪಂದ್ಯ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದ್ದರು. ಈ ಆಹ್ವಾನ ಸ್ವೀಕರಿಸಿದ ಗಿಲಾನಿ ಭಾರತಕ್ಕೆ ಆಗಮಿಸಿದ್ದರು. ಪಂಜಾಬಿನ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಇಬ್ಬರು ನಾಯಕರು ಎರಡು ತಂಡಗಳ ಆಟಗಾರರಿಗೆ ಕೈ ಕುಲುಕಿ ಶುಭ ಹಾರೈಸಿ ಒಟ್ಟಿಗೇ ಕುಳಿತು ವೀಕ್ಷಿಸಿದ್ದರು.

2012ರಲ್ಲಿ ಭಾರತ-ಪಾಕ್ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ನಡೆದಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕ್‌ 2-1  ಅಂತರದಿಂದ ಗೆದ್ದರೆ ಎರಡು ಪಂದ್ಯಗಳ ಟಿ20 ಸರಣಿ 1-1 ರಲ್ಲಿ ಡ್ರಾ ಗೊಂಡಿತ್ತು. ಎರಡು ತಂಡಗಳ ನಡುವಿನ ದ್ವಿಪಕ್ಷೀಯ ಸರಣಿ ನಡೆದಿದ್ದು ಅದೇ ಕೊನೆ ಬಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!