ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಜಕೀಯ ಕ್ಷೇತ್ರದ ಮಂದಿ ಮಾತ್ರವಲ್ಲದೇ ಸಿನಿಮಾ ಸೆಲೆಬ್ರಿಟಿಗಳು ಕೂಡ ಕಂಬನಿ ಮಿಡಿದಿದ್ದಾರೆ.
ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಎಲ್ಲ ಬಗೆಯ ಸಂಭ್ರಮಾಚರಣೆಗಳಿಗೆ ಬ್ರೇಕ್ ಹಾಕಲಾಗಿದೆ. ನಟ ಸಲ್ಮಾನ್ ಖಾನ್ ಸಹ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ.
ಡಿಸೆಂಬರ್ 27ರಂದು ‘ಸಿಕಂದರ್’ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ ಚಿತ್ರತಂಡ ಪ್ಲ್ಯಾನ್ ಬದಲಾಯಿಸಿದೆ.
ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ‘ಸಿಕಂದರ್’ ಸಿನಿಮಾದ ಟೀಸರ್ ಬಿಡುಗಡೆಯನ್ನು ರದ್ದು ಮಾಡಲಾಗಿದೆ. ಹಾಗಂತ ಅಭಿಮಾನಿಗಳಿಗೆ ನಿರಾಸೆ ಮಾಡಲು ಕೂಡ ಸಾಧ್ಯವಿಲ್ಲ. ಹಾಗಾಗಿ, ಹೆಚ್ಚು ಕಾಯಿಸದೇ ಕೇವಲ ಒಂದು ದಿನಕ್ಕೆ ಟೀಸರ್ ಬಿಡುಗಡೆ ದಿನಾಂಕವನ್ನು ಮುಂದೂಡಲು ಸಲ್ಮಾನ್ ಖಾನ್ ಮತ್ತು ಚಿತ್ರತಂಡದವರು ತೀರ್ಮಾನಿಸಿದ್ದಾರೆ.
ಹೊಸ ಪ್ಲ್ಯಾನ್ ಪ್ರಕಾರ, ‘ಸಿಕಂದರ್’ ಸಿನಿಮಾದ ಟೀಸರ್ ಡಿಸೆಂಬರ್ 28ರಂದು ರಿಲೀಸ್ ಮಾಡಲಾಗುವುದು. ಈ ಬಗ್ಗೆ ಚಿತ್ರತಂಡದಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಸಾಜಿದ್ ನಾಡಿಯದ್ವಾಲಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅವರ ನಿರ್ಮಾಣ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಟೀಸರ್ ಬಗ್ಗೆ ಅಪ್ಡೇಡ್ ನೀಡಲಾಗಿದೆ.
‘ಗೌರವಾನ್ವಿತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ನಮ್ಮ ಸಿಕಂದರ್ ಚಿತ್ರದ ಟೀಸರ್ ರಿಲೀಸ್ ಸಮಯವನ್ನು ಡಿಸೆಂಬರ್ 28ರ ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಮುಂದೂಡಲಾಗಿದೆ. ಅವರ ನಿಧನದ ನೋವಿನಲ್ಲಿ ನಾವು ಸಹ ಇದ್ದೇವೆ. ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ಪೋಸ್ಟ್ ಮಾಡಲಾಗಿದೆ.