ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಮೊದಲ ಎರಡು ಪಂದ್ಯಗಳಲ್ಲೇ ನಿರಾಶೆ ಅನುಭವಿಸಿದೆ. ಆರಂಭಿಕ ಪಂದ್ಯದಲ್ಲಿ 48 ರನ್‌ಗಳಿಂದ ಗೆದ್ದ ಟೀಮ್ ಇಂಡಿಯಾ, ಎರಡನೇ ಟಿ20ಯಲ್ಲಿ 209 ರನ್‌ಗಳ ಭಾರೀ ಗುರಿಯನ್ನು ಕೇವಲ 15.2 ಓವರ್‌ಗಳಲ್ಲಿ ಚೇಸ್ ಮಾಡಿ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.
ಈ ಸೋಲಿನ ನಂತರ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿದ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿ ಟೀಮ್ ಇಂಡಿಯಾವನ್ನು ಎದುರಿಸುವುದು ಅತ್ಯಂತ ಕಠಿಣ ಎಂದು ಒಪ್ಪಿಕೊಂಡ ಸ್ಯಾಂಟ್ನರ್, “200 ಅಥವಾ 210 ರನ್‌ಗಳು ಭಾರತ ವಿರುದ್ಧ ಸಾಕಾಗುವುದಿಲ್ಲ. ಗೆಲ್ಲಬೇಕಾದರೆ 300 ರನ್ ಆದರೂ ಮಾಡಲೇಬೇಕು” ಎಂದು ಹೇಳಿದ್ದಾರೆ.
ಭಾರತದ ಬ್ಯಾಟಿಂಗ್ ಲೈನ್‌ಅಪ್ ಅಪಾಯಕಾರಿ ಎಂದು ಹೇಳಿದ ಅವರು, ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ ಭಾರತ ಹೇಗೆ ದಾಳಿಗೆ ಇಳಿಯಿತು ಎಂಬುದೇ ಇದಕ್ಕೆ ಉದಾಹರಣೆ ಎಂದರು. ಇಶಾನ್ ಕಿಶನ್ 76 ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 82 ರನ್‌ಗಳೊಂದಿಗೆ ಪಂದ್ಯದ ದಿಕ್ಕು ತಿರುಗಿಸಿದರು. ಶಿವಂ ದುಬೆ ಕೂಡ ಅಂತಿಮ ಹಂತದಲ್ಲಿ ವೇಗದ ಬ್ಯಾಟಿಂಗ್ ಪ್ರದರ್ಶಿಸಿದರು.
ಮುಂದಿನ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಹಿನ್ನೆಲೆ, ಟೀಮ್ ಇಂಡಿಯಾ ಇತರ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬ ಸಂದೇಶ ಸ್ಯಾಂಟ್ನರ್ ಹೇಳಿಕೆಯಿಂದ ಸ್ಪಷ್ಟವಾಗಿದೆ.



