ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಜೈಪುರದ ಪ್ರತಿಷ್ಠಿತ ನೀರ್ಜಾ ಮೋದಿ ಶಾಲೆಯಲ್ಲಿ 9 ವರ್ಷದ ಬಾಲಕಿ ಅಮೈರಾ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬಾಲಕಿ ಈ ತೀವ್ರ ನಿರ್ಧಾರ ಕೈಗೊಳ್ಳುವ ಮುನ್ನ ನಡೆದ ಘಟನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಈಗ ಪೋಷಕರು ಬಿಡುಗಡೆ ಮಾಡಿದ್ದು, ಶಾಲೆಯಲ್ಲಿ ನಡೆಯುತ್ತಿದ್ದ ಭೀಕರ ಕಿರುಕುಳ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯ ಜಗತ್ತಿಗೆ ಬೆಳಕಿಗೆ ಬಂದಿದೆ.
ಬಾಲಕಿ ಕಳೆದ 18 ತಿಂಗಳುಗಳಿಂದ ತನ್ನ ಸಹಪಾಠಿಗಳಿಂದ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ಸಿಸಿಟಿವಿ ದೃಶ್ಯದಲ್ಲಿ ಏನಿದೆ?
ಪೋಷಕರು ಹಂಚಿಕೊಂಡಿರುವ ಸಿಸಿಟಿವಿ ದೃಶ್ಯಗಳ ಪ್ರಕಾರ, ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವ ಕೇವಲ 15 ನಿಮಿಷಗಳ ಮೊದಲು ತರಗತಿಯ ಒಳಗೆ ಇತರ ಮಕ್ಕಳು ಆಕೆಗೆ ತೀವ್ರವಾಗಿ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಮಕ್ಕಳು ಆಕೆಯ ಕೈಯನ್ನು ಹಿಡಿದು ಎಳೆಯುವುದು, ಬೆನ್ನಿನ ಮೇಲೆ ಹೊಡೆಯುವುದು ಮತ್ತು ಆಕೆಯ ವಸ್ತುಗಳನ್ನು ಕಸಿದುಕೊಳ್ಳುತ್ತಿರುವುದು ದಾಖಲಾಗಿದೆ. ಈ ಇಡೀ ಘಟನೆ ನಡೆಯುವಾಗ ತರಗತಿಯಲ್ಲಿ ಯಾವುದೇ ಶಿಕ್ಷಕರು ಇರಲಿಲ್ಲ. ಇದರಿಂದ ತೀವ್ರ ನೊಂದ ಬಾಲಕಿ ಅಳುತ್ತಾ ತರಗತಿಯಿಂದ ಹೊರಗೆ ಬಂದು, ನೇರವಾಗಿ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದಿದ್ದಾಳೆ.
ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿತನ
ನನ್ನ ಮಗಳಿಗೆ ಶಾಲೆಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ನಾವು ಈಗಾಗಲೇ ಹಲವು ಬಾರಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ದೂರು ನೀಡಿದ್ದೆವು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಘಟನೆ ನಡೆದ ದಿನವೂ ತರಗತಿಯಲ್ಲಿ ಶಿಕ್ಷಕರು ಇರಲಿಲ್ಲ, ಇಷ್ಟೇ ಅಲ್ಲದೆ ನಾಲ್ಕನೇ ಮಹಡಿಯ ಕಾರಿಡಾರ್‌ನಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಅಥವಾ ಮುನ್ನೆಚ್ಚರಿಕೆ ಗ್ರಿಲ್‌ಗಳನ್ನು ಅಳವಡಿಸಿರಲಿಲ್ಲ ಎಂದು ಬಾಲಕಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ತನಿಖೆ ತೀವ್ರಗೊಳಿಸಿದ ಪೊಲೀಸರು
ಘಟನೆಗೆ ಸಂಬಂಧಿಸಿದಂತೆ ಜೈಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೋಷಕರು ನೀಡಿರುವ ಸಿಸಿಟಿವಿ ಆಧಾರದ ಮೇಲೆ ಶಾಲೆಯ ಶಿಕ್ಷಕರು, ಪ್ರಾಂಶುಪಾಲರು ಮತ್ತು ಕಿರುಕುಳ ನೀಡಿದ ವಿದ್ಯಾರ್ಥಿಗಳ ಪೋಷಕರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಶಾಲೆಯ ಈ ಭೀಕರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಮತ್ತು ಪೋಷಕರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.



