ಬಿಜಿಎಸ್‌ನಲ್ಲಿ ಆಧುನಿಕ ಶಿಕ್ಷಣದ ಜೊತೆಗೆ ಆಧ್ಯಾತ್ಮ ಶಿಕ್ಷಣ: ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ

ಹೊಸದಿಗಂತ ವರದಿ,ಮಂಗಳೂರು:

ಆಧುನಿಕ ಶಿಕ್ಷಣದ ಜೊತೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಂಸ್ಕಾರಯುತರನ್ನಾಗಿ ಮಾಡುವ ಮಹತ್ ಕಾರ್ಯ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮೂಲಕ ಆಗುತ್ತಿದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಹಾಗೂ ಮಂಗಳೂರು ಶಾಖಾ ಮಠದ ರಜತ ಮಹೋತ್ಸವದ ಅಂಗವಾಗಿ ನಗರದ ಕಾವೂರು ಬಿಜಿಎಸ್ ಕಾಲೇಜಿನ ಆವರಣದಲ್ಲಿ ಬುಧವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಆಧುನಿಕ ವಿದ್ಯೆ ಎಲ್ಲಾ ಕಡೆ ದೊರೆಯುತ್ತಿದೆ. ಶೇ.80ರಷ್ಟು ಸಾಕ್ಷರತೆಯನ್ನೂ ಪಡೆಯುತ್ತೇವೆ. ಆದರೆ ಬಹಳಷ್ಟು ಮಂದಿ ಆಧ್ಯಾತ್ಮಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆಧ್ಯಾತ್ಮಿಕ ಶಿಕ್ಷಣವನ್ನು ಸಮಾಜ ಮರೆಯುತ್ತಿದೆಯೇ ಎಂಬ ಭಯವೂ ಕಾಡಲಾರಂಭಿಸಿದೆ. ಆದರೆ ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಆಧುನಿಕ ಮತ್ತು ಸಂಸ್ಕಾರಯುತ ಶಿಕ್ಷಣದೊಂದಿಗೆ ಆಧ್ಯಾತ್ಮಿಕತೆಯ ಅಂಶವನ್ನೂ ಮಕ್ಕಳಲ್ಲಿ ಬಿತ್ತುವ ಮೂಲಕ ಅವರನ್ನು ಪಕ್ವವಾಗಿಸುತ್ತಿದೆ. ಜಗಕೆ ಬೆಳಕು ನೀಡಿದವರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು. ಅವರ ತತ್ವದಡಿಯಲ್ಲಿಯೇ ಬಿಜಿಎಸ್ ಸಂಸ್ಥೆಗಳು ಮುನ್ನಡೆಯುತ್ತಿವೆ. ಯಾವುದು ಮನಸ್ಸಿನ ಕ್ಲೇಶಗಳನ್ನು ಮುಕ್ತಗೊಳಿಸುತ್ತದೆಯೇ ಅದುವೇ ವಿದ್ಯೆ. ಅದಕ್ಕೆ ಪೂರಕವಾದ ಶಿಕ್ಷಣ ಬಿಜಿಎಸ್‌ನಲ್ಲಿ ದೊರೆಯುತ್ತಿದೆ ಎಂದು ಸ್ವಾಮೀಜಿ ಹೇಳಿದರು.

ಬಿಜಿಎಸ್‌ನಿಂದ ಮೌಲ್ಯಾಧಾರಿತ ಶಿಕ್ಷಣ: ನಳಿನ್
ಪ್ರಸಕ್ತ ಸಮಾಜದಲ್ಲಿ ಶಿಕ್ಷಣದ ಕೊರತೆಯಿಲ್ಲ. ಆದರೆ ಧರ್ಮಾಧಾರಿತ ಮತ್ತು ಮೌಲ್ಯಧಾರಿತ ಶಿಕ್ಷಣದ ಕೊರತೆ ಇದೆ. ಆ ಕೊರತೆಯನ್ನು ನೀಗಿಸುವ ಕೆಲಸವನ್ನು ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ ಎಂದು ದಕ್ಷಿಣ ಕನ್ನಡ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅತೀ ಹಿಂದುಳಿದ ವರ್ಗ ಸೇರಿದಂತೆ ಪ್ರತಿಯೊಬ್ಬರೂ ಶಿಕ್ಷಣದ ಅವಕಾಶದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಅನ್ನದಾಸೋಹದ ಮೂಲಕ ಅಕ್ಷರದಾಸೋಹವನ್ನು ಕೊಟ್ಟರು. ಆ ಮೂಲಕ ಹಿಂದೂ ಸಮಾಜವನ್ನು ಮತ್ತಷ್ಟು ಸಶಕ್ತವಾಗಿಸಿದರು ಎಂದವರು ಹೇಳಿದರು.

ಕಾವೂರಿನ ಗಾಂಧಿನಗರದ ಬಂಡೆಯ ಪುರವನ್ನು ಶಿಕ್ಷಣ ಪುರವನ್ನಾಗಿಸಿದವರು ಡಾ.ಧರ್ಮಪಾಲನಾಥ ಸ್ವಾಮೀಜಿಯವರು. ಎಲ್ಲರನ್ನು ಸಂಘಟಿಸುವ ಮೂಲಕ ಕಳೆದ 25 ವರ್ಷಗಳಲ್ಲಿ ಮಹತ್ತರವಾದ ಕೆಲಸವನ್ನು ಅವರು ಮಾಡಿದ್ದಾರೆ. ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಾಧಕರ ನಿರ್ಮಾಣ ಈ ಸಂಸ್ಥೆಯ ಮೂಲಕ ಆಗುತ್ತಿದೆ. ಕಾವೂರಿನಲ್ಲಿ ಬಿಜಿಎಸ್ ಒಂದು ವಿಶ್ವವಿದ್ಯಾಲಯವಾಗಿ ಬೆಳೆಯಲಿದೆ ಎಂದು ನಳಿನ್ ಹೇಳಿದರು.

ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಂಗಳೂರಿನ ಕಾವೂರು ಶಾಖಾ ಮಠದ ಅಧ್ಯಕ್ಷ ಡಾ.ಧರ್ಮಪಾಲನಾಥ ಸ್ವಾಮೀಜಿ, ಶಿವಲಿಂಗನಾಥ ಮಹಾ ಸ್ವಾಮೀಜಿ, ಬಸವಶಿವಮೂರ್ತಿ ಸ್ವಾಮೀಜಿ, ಮಾದಾರ ಚೆನ್ನಯ್ಯ ಮಹಾ ಸ್ವಾಮೀಜಿ, ಶಾಸಕ ಹಾಗೂ ರಜತಮಹೋತ್ಸವ ಸಮಿತಿ ಅಧ್ಯಕ್ಷ ಡಾ.ವೈ.ಭರತ್ ಶೆಟ್ಟಿ, ರಜತ ಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಪಿ.ಎಸ್.ಪ್ರಕಾಶ್, ಮಾಜಿ ಶಾಸಕ ಸಂಜೀವ ಮಠಂದೂರು, ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಬಿಜಿಎಸ್ ಶಿಕ್ಷಣ ಟ್ರಸ್ಟ್‌ನ ಶಿವರಾಮು, ಸಂಸ್ಥಾನದ ಮುಖ್ಯ ಆಡಳಿತಾಕಾರಿ ರಾಮೇಗೌಡ, ಪ್ರವಚನಕಾರರಾದ ಜಯಪ್ರಕಾಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಭವ್ಯ ಮೆರವಣಿಗೆ
ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಹಾಗೂ ಮಂಗಳೂರು ಶಾಖಾ ಮಠದ ರಜತ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾವೂರಿನ ಕುದುರೆಮುಖ ಕಾಲೊನಿಯಿಂದ ಕುಣಿತ ಭಜನೆ, ಜನಪದ ನೃತ್ಯ ಕಲಾತಂಡಗಳು, ಚೆಂಡೆ ವಾದ್ಯಗಳಿಂದ ಚೌಡೇಶ್ವರಿ ಅಮ್ಮನವರ ಭವ್ಯ ಮೆರವಣಿಗೆ ಬಿಜಿಎಸ್ ಕಾಲೇಜು ಆವರಣದವರೆಗೆ ನಡೆಯಿತು.

ಈ ಸಂದರ್ಭ ಶ್ರೀಕ್ಷೇತ್ರ ಆದಿಚುಂಚನಗಿರಿಯ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಕಾವೂರು ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಎಲ್ಲ ಶಾಖಾಮಠಗಳ ಯತಿಶ್ರೇಷ್ಠರು ಮೆರವಣಿಗೆಯಲ್ಲಿ ಭಾಗವಹಿಸಿದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!