ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಶ್ರದ್ಧೆಯ ಕೇಂದ್ರವಾಗಿರುವ ತಿರುಮಲ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಕಲಬೆರಕೆ ನಡೆದಿರುವ ಪ್ರಕರಣ ಈಗ ಅಂತಿಮ ಹಂತ ತಲುಪಿದೆ. ಕೇಂದ್ರ ತನಿಖಾ ದಳ ನೇತೃತ್ವದ ಎಸ್‌ಐಟಿ ತಂಡವು ನೆಲ್ಲೂರು ಎಸಿಬಿ ನ್ಯಾಯಾಲಯಕ್ಕೆ ಬರೋಬ್ಬರಿ 36 ಮಂದಿ ಆರೋಪಿಗಳ ಹೆಸರನ್ನು ಒಳಗೊಂಡ ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ಕಳೆದ 15 ತಿಂಗಳುಗಳ ಕಾಲ ದೇಶದ 12 ರಾಜ್ಯಗಳಲ್ಲಿ ವ್ಯಾಪಕ ತನಿಖೆ ನಡೆಸಿದ ನಂತರ ಈ ವರದಿ ಸಿದ್ಧವಾಗಿದೆ.
2019 ರಿಂದ 2024ರ ನಡುವೆ ಅಂದಾಜು 250 ಕೋಟಿ ರೂ. ಮೌಲ್ಯದ ಸುಮಾರು 68 ಲಕ್ಷ ಕೆಜಿ ನಕಲಿ ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡಲಾಗಿದೆ.
ಶುದ್ಧ ಹಾಲಿನ ತುಪ್ಪದ ಬದಲು ಪಾಮ್ ಆಯಿಲ್, ಕರ್ನಲ್ ಆಯಿಲ್, ರಾಸಾಯನಿಕಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬೆರೆಸಿ, ಅದನ್ನು ಶುದ್ಧ ತುಪ್ಪದಂತೆ ಕಾಣುವಂತೆ ರೂಪಿಸಲಾಗಿತ್ತು.
ಉತ್ತರಾಖಂಡದ ಭೋಲೆ ಬಾಬಾ ಆರ್ಗಾನಿಕ್ ಡೈರಿಯ ಮಾಲೀಕರು ಈ ಜಾಲದ ಮುಖ್ಯಸ್ಥರು ಎಂದು ಗುರುತಿಸಲಾಗಿದೆ. ಅಲ್ಲದೆ, ವೈಷ್ಣವಿ ಡೈರಿ, ಎಆರ್ ಡೈರಿಗಳ ಮಾಲೀಕರು ಮತ್ತು ಟಿಟಿಡಿಯ ಕೆಲವು ಮಾಜಿ ಅಧಿಕಾರಿಗಳು ಈ ಭ್ರಷ್ಟಾಚಾರದ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಉಲ್ಲೇಖಿಸಿದೆ.



