ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ: ಸರಕಾರಕ್ಕೆ ವರದಿ ನೀಡಿದ ಮಹಿಳಾ ಆಯೋಗ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿನ ಬಾಣಂತಿಯರ ಸರಣಿ ಸಾವು ಪ್ರಕರಣ ಸರ್ಕಾರದ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇದೀಗ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು, ಪರಿಹಾರ ಕ್ರಮಗಳ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಹೆರಿಗೆಯ ನಂತರ ತಾಯಂದಿರ ಸಾವುಗಳು ಸಂಭವಿಸುತ್ತಿವೆ. ನಮ್ಮ ದೇಶವು ವೈದ್ಯಕೀಯ ರಂಗದಲ್ಲಿ ಅತಿ ಹೆಚ್ಚು ಮುಂದುವರೆದಿದ್ದು, ಇಂತಹ ಸಾವುಗಳು ಮುಂದೆ ಸಂಭವಿಸುವುದನ್ನು ತಡೆಗಟ್ಟಲು ಹೆರಿಗೆಯ ಪೂರ್ವ ಮತ್ತು ಹೆರಿಗೆಯ ನಂತರ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ನೀಡಿದಾಗ ತಾಯಂದಿರ ಸಾವನ್ನು ತಡೆಗಟ್ಟಬಹುದಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬಾಣಂತಿಯರ ಸಾವು ಸಂಭವಿಸಿದ ಆಸ್ಪತ್ರೆಗಳಿಗೆ ಭೇಟಿ ನೀಡಿ ಕಂಡ ಸಮಸ್ಯೆಗಳು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದ್ದಾರೆ.

ವರದಿಯಲ್ಲೇನಿದೆ?
ಗರ್ಭಿಣಿಯರಿಗೆ ಯಥೇಚ್ಛವಾಗಿ ನೀರು ಕುಡಿಯುವಂತೆ ಮಾಹಿತಿ ನೀಡುವುದು. ಪ್ರತಿ ಎರಡು ತಿಂಗಳಿಗೊಮ್ಮೆ Urine routine test ಕಡ್ಡಾಯವಾಗಿ ಮಾಡುವುದು.

ಗರ್ಭಿಣಿ ಸ್ತ್ರೀಯರಿಗೆ ಸರ್ಕಾರದಿಂದ ದೊರಕುತ್ತಿರುವ ಮೊಟ್ಟೆ ಮುಂತಾದ ಪೌಷ್ಠಿಕ ಆಹಾರಗಳು ಸರಿಯಾಗಿ ದೊರಕುತ್ತಿರುವುದಿಲ್ಲ. ಅವುಗಳನ್ನು ಸರಿಯಾಗಿ ವಿತರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡುವುದು.

ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆ ಕೊಠಡಿಗಳು, ICU, Ventilators ಗಳು ಇರುವಂತೆ ನೋಡಿಕೊಳ್ಳುವುದು ಹಾಗೂ ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದು. Eclampsia Kitಗಳು ಇರುವಂತೆ ನೋಡಿಕೊಳ್ಳುವುದು.

ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ಸ್ಕ್ಯಾನಿಂಗ್ ತಜ್ಞರು, ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್ ಹಾಗೂ ಇತರೆ ಸಿಬ್ಬಂದಿಗಳ ಕೊರತೆ ಮುಖ್ಯವಾಗಿ ಎದ್ದು ಕಾಣುತ್ತಿದೆ. ರೋಗಿಗಳಿಗನುಸಾರವಾಗಿ ಎಲ್ಲಾ ಆಸ್ಪತ್ರೆಗಳಿಗೆ ಸಿಬ್ಬಂದಿಗಳನ್ನು ಶೀಘ್ರ ನೇಮಕ ಮಾಡಲು ಕ್ರಮ ವಹಿಸುವುದು.

ಸರ್ಕಾರಿ ಆಸ್ಪತ್ರೆಗಳಲ್ಲಿನ ನೀರಿನ ಟ್ಯಾಂಕ್‌ಗಳಲ್ಲಿ ಪಾಚಿಕಟ್ಟಿದ್ದು ನೀರು ಕಲುಷಿತಗೊಂಡಿದ್ದು , ಅದೇ ನೀರು ಹೆರಿಗೆ ಕೊಠಡಿಗೂ ಸರಬರಾಜು ಆಗುತ್ತಿದೆ. ಆ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟಿರಿಯಾಗಳು ಇರುವ ಸಾಧ್ಯತೆ ಇದ್ದು ಪ್ರಾಣಾಪಾಯಕ್ಕೂ ಎಡೆಮಾಡಿಕೊಡುವ ಸಂಭವವಿರುತ್ತದೆ. ಹಾಗಾಗಿ ಆಸ್ಪತ್ರೆಗಳಲ್ಲಿನ ನೀರಿನ ಟ್ಯಾಂಕ್‌ಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು, ಅಪಾಯಕಾರಿ ಬ್ಯಾಕ್ಟಿರಿಯಾ ಇಲ್ಲದೇ ಇರುವ ಬಗ್ಗೆ ಖಚಿತಪಡಿಸುವಂತೆ ಸೂಚನೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಅಪರೇಷನ್ ಥಿಯೇಟರ್, ಐಸಿಯು, ವಾರ್ಡ್ ಮುಂತಾದವುಗಳ ಶುಚಿತ್ವ ಕಾಪಾಡುವಲ್ಲಿ ಆಡಳಿತ ವರ್ಗದವರು ವಿಫಲವಾಗಿದ್ದಾರೆ. ಶೀಘ್ರವಾಗಿ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಬೇಕಾಗಿ ಅಧಿಕಾರಿಗಳಿಗೆ ಆದೇಶ ನೀಡುವುದು.

ಶಸ್ತ್ರ ಚಿಕಿತ್ಸೆ, ರಕ್ತ ಪರೀಕ್ಷೆಗಳನ್ನು ಮಾಡುವಾಗ ಉಪಕರಣಗಳನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ದ್ರಾವಣಗಳನ್ನು ಬಳಸುತ್ತಿರುವುದಿಲ್ಲ. ಸೋಂಕು ನಿವಾರಕ ದ್ರಾವಣಗಳಿಂದ ಉಪಕರಣಗಳನ್ನು ಸ್ವಚ್ಛಗೊಳಿಸಲು ಕ್ರಮವಹಿಸುವುದು. ಆಟೋ ಕ್ಷೇವ್ ವಿಧಾನದ ಮೂಲಕ ಸಾಧನಗಳನ್ನು ಸ್ಪೆರಲೈಸೇಶನ್ ಮಾಡುವುದು.

ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ಶೌಚಾಲಯಗಳ ಸ್ವಚ್ಛತೆ ಇರುವುದಿಲ್ಲ. ಹಲವು ಆಸ್ಪತ್ರೆಗಳಲ್ಲಿ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ, ಬಾಗಿಲುಗಳು ಇಲ್ಲ. ಹಾಗಾಗಿ ಕೂಡಲೇ ಶೌಚಾಲಯಗಳ ಸ್ವಚ್ಛತೆ ಕಡೆಗೆ ಗಮನ ಹರಿಸುವುದು.

ರಾಜ್ಯದಲ್ಲಿ ಸದ್ಯ ಮೃತಪಟ್ಟಿರುವ ಬಾಣಂತಿಯರ ಮಕ್ಕಳಿಗೆ ಅವರ ಉನ್ನತ ವಿದ್ಯಾಭ್ಯಾಸದವರೆಗೆ ಉಚಿತ ಶಿಕ್ಷಣ ನೀಡಲು ಸರ್ಕಾರವು ಮುಂದಾಗುವುದು. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!