ಹೊಸದಿಗಂತ ರಾಯಚೂರು:
ಜಿಲ್ಲೆಯ ಶಕ್ತಿ ಕೇಂದ್ರವಾದ ಆರ್‌ಟಿಪಿಎಸ್ ಆವರಣದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಸ್ಥಳೀಯವಾಗಿ ಭಾರೀ ಪ್ರತಿರೋಧ ವ್ಯಕ್ತವಾಗಿದೆ. “ಯಾವುದೇ ಕಾರಣಕ್ಕೂ ರಾಯಚೂರಿನಲ್ಲಿ ಅಣು ಸ್ಥಾವರ ತಲೆ ಎತ್ತಲು ಬಿಡುವುದಿಲ್ಲ” ಎಂದು ನಾಗರೀಕ ವೇದಿಕೆ ಹೋರಾಟ ಸಮಿತಿಯ ಅಧ್ಯಕ್ಷರಾದ ಬಸವರಾಜ ಕಳಸಾ ಅವರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದಾಗುವ ಭೀಕರ ಪರಿಣಾಮಗಳ ಕುರಿತು ಆತಂಕ ಹಂಚಿಕೊಂಡರು:
ದಟ್ಟ ಅರಣ್ಯ ಮತ್ತು ಸಮುದ್ರ ತೀರವಿರುವ ಕೈಗಾದಲ್ಲೇ ಅಣು ಸ್ಥಾವರಕ್ಕೆ ದೊಡ್ಡ ವಿರೋಧ ವ್ಯಕ್ತವಾಗಿತ್ತು. ಹಾಗಿರುವಾಗ, ಅರಣ್ಯವೇ ಇಲ್ಲದ ಬಿಸಿಲು ನಾಡು ರಾಯಚೂರಿನ ಬಯಲು ಪ್ರದೇಶದಲ್ಲಿ ಇಂತಹ ಅಪಾಯಕಾರಿ ಘಟಕ ಸ್ಥಾಪಿಸುವುದು ಅತ್ಯಂತ ಭಯಾನಕ ನಿರ್ಧಾರ. ಇದು ಸುತ್ತಮುತ್ತಲ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
“ಪ್ರಸ್ತುತ ಇರುವ ಕಲ್ಲಿದ್ದಲು ಘಟಕದಿಂದ ಹೊರಬರುತ್ತಿರುವ ಹಾರು ಬೂದಿಯನ್ನೇ ಸರಿಯಾಗಿ ನಿರ್ವಹಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಈ ಬೂದಿ ಕೃಷ್ಣಾ ನದಿ ಸೇರಿ ಜಲಚರಗಳು ನಾಶವಾಗುತ್ತಿವೆ. ಇನ್ನು ಸಾವಿರಾರು ವರ್ಷಗಳ ಕಾಲ ವಿಕಿರಣ ಸೂಸುವ ಅಣು ತ್ಯಾಜ್ಯವನ್ನು ಇವರು ಹೇಗೆ ನಿಭಾಯಿಸುತ್ತಾರೆ?” ಎಂದು ಕಳಸಾ ಪ್ರಶ್ನಿಸಿದರು.
ದೇವದುರ್ಗ ಮತ್ತು ಯಾದಗಿರಿ ಭಾಗಗಳಲ್ಲಿ ಯುರೇನಿಯಂ ಲಭ್ಯವಿರುವುದು ಈಗಾಗಲೇ ಸಂಶೋಧನೆಗಳಿಂದ ತಿಳಿದುಬಂದಿದೆ. ಇದು ನೀರಿನಲ್ಲಿ ಮಿಶ್ರಣವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಣು ಸ್ಥಾವರ ಸ್ಥಾಪನೆಯು ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ತಳ್ಳಲಿದೆ ಎಂದು ಅವರು ಎಚ್ಚರಿಸಿದರು.
ಕೇಂದ್ರದ ಸಮೀಕ್ಷಾ ತಂಡ ಈಗಾಗಲೇ ಭೇಟಿ ನೀಡಿ ಹೋಗಿರುವುದು ಆತಂಕಕಾರಿ. ಸರ್ಕಾರ ಈ ಕೂಡಲೇ ಯೋಜನೆಯಿಂದ ಹಿಂದೆ ಸರಿಯಬೇಕು, ಇಲ್ಲದಿದ್ದರೆ ಜಿಲ್ಲಾದ್ಯಂತ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಮಾರೆಪ್ಪ, ಅಶೋಕಕುಮಾರ ಜೈನ್, ನರಸಿಂಹುಲು, ಮಲ್ಲಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



