July 7, 2026
Tuesday, July 7, 2026
spot_img

ಗಡಿ ಕನ್ನಡಿಗರ ಸಮಸ್ಯೆಗಳ ಕುರಿತು ಸಿಎಂ ಗಮನ ಸೆಳೆಯಲು ನಾಳೆ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಪೂರ್ವಭಾವಿ ಸಭೆ

ಹೊಸದಿಗಂತ ವರದಿ ಬೆಳಗಾವಿ:

ಇದೇ ಗುರುವಾರ (ಜುಲೈ 9) ಬೆಳಗಾವಿಗೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಗಡಿಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಬೆಳಗಾವಿಯ 22 ಸಮಾನ ಮನಸ್ಕ ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ. ಈ ಭೇಟಿಯ ಕುರಿತು ಪೂರ್ವಭಾವಿ ಚರ್ಚೆ ನಡೆಸಲು ಬುಧವಾರ ಬೆಳಿಗ್ಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಂಘಟನೆಗಳ ಪ್ರಮುಖರ ಮಹತ್ವದ ಸಭೆಯನ್ನು ಕರೆಯಲಾಗಿದೆ.

ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಗಡಿ ಕನ್ನಡಿಗರು ಎದುರಿಸುತ್ತಿರುವ ಪ್ರಮುಖ ಮೂರು ವಿಷಯಗಳ ಕುರಿತು ಸಿಎಂ ಗಮನ ಸೆಳೆಯಲು ಸಂಘಟನೆಗಳು ಮುಂದಾಗಿವೆ..

​ಮಹಾರಾಷ್ಟ್ರದ ಬೆಳವಣಿಗೆಗಳು: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದಿರುವ ರಾಜಕೀಯ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿಕೊಡುವುದು.

​ಬೆಳಗಾವಿ ಪಾಲಿಕೆ ಸೂಪರ್‌ಸೀಡ್‌ಗೆ ಒತ್ತಾಯ: ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಲು ಸತತವಾಗಿ ನಿರಾಕರಿಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ತಕ್ಷಣವೇ ಸೂಪರ್‌ಸೀಡ್ (ಅಮಾನತು) ಮಾಡಬೇಕೆಂದು ಗಡಿ ಕನ್ನಡಿಗರು ಈ ಸಂದರ್ಭದಲ್ಲಿ ಬಲವಾಗಿ ಒತ್ತಾಯಿಸಲಿದ್ದಾರೆ.

​ಅಧಿಕಾರಿಗಳ ಬೇಜವಾಬ್ದಾರಿತನ: ಬೆಳಗಾವಿ ಪಾಲಿಕೆಯ ವ್ಯವಹಾರ ಹಾಗೂ ಗಡಿ ಕನ್ನಡಿಗರ ರಕ್ಷಣೆಯ ವಿಷಯದಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ನಿರ್ಧರಿಸಲಾಗಿದೆ.

​ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ನಿಗದಿ:
​ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಯಾವ ಸ್ಥಳದಲ್ಲಿ ಮತ್ತು ಯಾವ ಸಮಯದಲ್ಲಿ ಭೇಟಿಯಾಗಬೇಕು ಎಂಬುದನ್ನು ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು,ಎಂದು ಬೆಳಗಾವಿ ಜಿಲ್ಲಾ ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
​ಬುಧವಾರ ನಡೆಯಲಿರುವ ಸಭೆಗೆ ಬೆಳಗಾವಿಯ ಎಲ್ಲಾ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಪ್ರಮುಖರು ಸಕಾಲದಲ್ಲಿ ಹಾಜರಾಗಬೇಕೆಂದು ಮನವಿ‌ ಮಾಡಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !