ಹೊಸ ದಿಗಂತ ಡಿಜಿಟಲ್ ಡೆಸ್ಕ್:
24 ಗಂಟೆಗಳಲ್ಲಿ ಇಸ್ರೇಲಿ ಪಡೆಗಳು ಗಾಜಾಪಟ್ಟಿಯಲ್ಲಿ ನಡೆಸಿದ ನಾಲ್ಕು ದಾಳಿಗಳಿಂದ ಕನಿಷ್ಠ 59 ಪ್ಯಾಲೆಸ್ತೀನಿಯರು ಮೃತಪಟ್ಟು, 273 ಮಂದಿ ಗಾಯಗೊಂಡಿದ್ದಾರೆ.
ಗಾಜಾದ ವೈದ್ಯಕೀಯ ಮೂಲಗಳ ಪ್ರಕಾರ, ಹಲವು ನಾಗರಿಕರು ಇನ್ನೂ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದಾರೆ ಮತ್ತು ರಸ್ತೆಗಳ ಮೇಲೆಯೇ ಬಿದ್ದಿದ್ದಾರೆ.
2023ರ ಅಕ್ಟೋಬರ್ 7 ರಿಂದ ಅಂದರೆ ಕಳೆದ 456 ದಿನಗಳಿಂದ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಗಳಿಂದ 45,717 ಮಂದಿ ಮೃತಪಟ್ಟು, 10,886 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ – ಹಿಜ್ಬುಲ್ಲಾ ನಡುವಿನ ಕದನ ವಿರಾಮ : ಇಸ್ರೇಲ್ ಮತ್ತು ಲೆಬನಾನ್ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ನಡುವಿನ ಕದನ ವಿರಾಮವನ್ನು ಒಂದು ತಿಂಗಳ ಕಾಲ ಜಾರಿಯಲ್ಲಿತ್ತು. ಆದರೆ ಒಪ್ಪಂದದ ಗಡುವಿನೊಳಗೆ ಕದನ ವಿರಾಮ ಷರತ್ತುಗಳ ಪಾಲನೆ ಅನುಮಾನವಾಗಿದೆ.
ನವೆಂಬರ್ 27 ರಂದು ನಡೆದ ಕದನ ವಿರಾಮ ಒಪ್ಪಂದದ ಪ್ರಕಾರ, ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಮತ್ತು ಇಸ್ರೇಲಿ ಪಡೆಗಳು ಲೆಬನಾನ್ನಿಂದ ಹಿಂದೆ ಸರಿಯಬೇಕು. ಇದರ ಜೊತೆಗೆ ಲೆಬನಾನ್ ಸೈನ್ಯ ಮತ್ತು ಯುಎನ್ ಶಾಂತಿಪಾಲಕರಿಗೆ ಇಸ್ರೇಲಿ ತನ್ನ ನಿಯಂತ್ರಣವನ್ನು ಹಸ್ತಾಂತರಿಸಲು 60 ದಿನಗಳ ಗಡುವು ನೀಡಲಾಗಿತ್ತು.
ಆದರೆ ಇಸ್ರೇಲ್, ಇಲ್ಲಿಯವರೆಗೆ ದಕ್ಷಿಣ ಲೆಬನಾನ್‌ನಲ್ಲಿ ತನ್ನ ಹಿಡಿತದಲ್ಲಿರುವ ಡಜನ್ಗಟ್ಟಲೆ ಪಟ್ಟಣಗಳ ಪೈಕಿ ಕೇವಲ ಎರಡರಿಂದ ಮಾತ್ರ ಹಿಂದೆ ಸರಿದಿದೆ ಮತ್ತು ಹಿಜ್ಬುಲ್ಲಾಗೆ ಸೇರಿದ ನೆಲೆಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದೆ.