ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಹೊರವಲಯದ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರದಲ್ಲಿ ತಾಯಿಯನ್ನು ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಹಾಲಕ್ಷ್ಮಿ (41) ಕೊಲೆಯಾದ ಮಹಿಳೆ. ರಮೇಶ್ (21) ತಾಯಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ. ಚಿತ್ರದುರ್ಗ ಮೂಲದ ಚಳ್ಳಕೆರೆಯ ಚಿಕ್ಕಹಳ್ಳಿ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಂದಿದ್ದರು. ಆದ್ರೆ, ಮಗ ಕುಡಿದುಬಂದು ತಾಯಿ ಜೊತೆ ಜಗಳ ಮಾಡುತ್ತಿದ್ದ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮೊಬೈಲ್ ಚಾರ್ಜರ್ ವೈರ್ನಿಂದ ತಾಯಿ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.
ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರ ಮತ್ತು ಬೆಂಗಳೂರು ಗ್ರಾಮಾಂತರ ಎಎಸ್ಪಿ ನಾಗೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ದೇಹಗಳನ್ನು ಅತ್ತಿಬೆಲೆ ಆಕ್ಸ್ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.