ಹೊಸದಿಗಂತ ಚಿತ್ರದುರ್ಗ:
ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಇಂದು ಐತಿಹಾಸಿಕ ಬದಲಾವಣೆಯೊಂದು ಸಂಭವಿಸಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೇಂದ್ರೀಯ ವಿದ್ಯಾಲಯದ ಕನಸು ಈಗ ನನಸಾಗಿದ್ದು, 2026-27ನೇ ಶೈಕ್ಷಣಿಕ ವರ್ಷದಿಂದಲೇ ಶಾಲೆ ಪ್ರಾರಂಭಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ಅಧಿಕೃತ ಅನುಮೋದನೆ ನೀಡಿದೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಜಾಗದ ಸಮಸ್ಯೆಯಿಂದಾಗಿ ಈ ಯೋಜನೆ ವಿಳಂಬವಾಗಿತ್ತು. ಈ ಹಿಂದೆ ಎರಡು-ಮೂರು ಕಡೆಗಳಲ್ಲಿ ಗುರುತಿಸಲಾಗಿದ್ದ ಜಾಗವನ್ನು ಕೆ.ವಿ. ಆಯುಕ್ತರು ತಿರಸ್ಕರಿಸಿದ್ದರು. ಆದರೆ ಈಗ ಜಿಲ್ಲಾಡಳಿತವು ಜಾಲಿಕಟ್ಟೆ ಬಳಿಯ ರಿ.ಸ.ನಂ. 24ರಲ್ಲಿ 5 ಎಕರೆ ಜಾಗವನ್ನು ಯಶಸ್ವಿಯಾಗಿ ಹಸ್ತಾಂತರಿಸಿದೆ.
ಶಾಲೆ ತಕ್ಷಣವೇ ಆರಂಭವಾಗಲು ಅನುಕೂಲವಾಗುವಂತೆ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ 12 ಸುಸಜ್ಜಿತ ಕೊಠಡಿಗಳನ್ನು ಹಸ್ತಾಂತರಿಸಲಾಗಿದೆ. ಮೊದಲ ಹಂತದಲ್ಲಿ 1 ರಿಂದ 5ನೇ ತರಗತಿಯವರೆಗೆ ದಾಖಲಾತಿಗಳು ನಡೆಯಲಿವೆ.
ಮುಂದಿನ ದಿನಗಳಲ್ಲಿ ಬಾಲವಾಡಿ (LKG, UKG), 10ನೇ ತರಗತಿ ಹಾಗೂ ಪಿಯುಸಿ ವಿಜ್ಞಾನ ವಿಭಾಗಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ.
ಜಾಲಿಕಟ್ಟೆಯಲ್ಲಿ ಶಾಲೆಯ ಸ್ವಂತ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ ಸಂಸದರು, ಜಿಲ್ಲೆಗೆ ಈ ಮಹತ್ವದ ಯೋಜನೆ ನೀಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.



