Saturday, January 24, 2026
Saturday, January 24, 2026
spot_img

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್: ಸಂಕಷ್ಟದಲ್ಲಿ ‘ಕೈ’ ನಾಯಕ, ನಿರೀಕ್ಷಣಾ ಜಾಮೀನು ಅರ್ಜಿ ವಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಪ್ರಕರಣದ ಪ್ರಮುಖ ಆರೋಪಿ ರಾಜೀವ್ ಗೌಡಗೆ ನ್ಯಾಯಾಲಯದಲ್ಲಿ ಭಾರಿ ಹಿನ್ನಡೆಯಾಗಿದೆ. ರಾಜೀವ್ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಚಿಕ್ಕಬಳ್ಳಾಪುರ ಅಪರ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ಇಂದು ವಜಾಗೊಳಿಸಿ ಆದೇಶಿಸಿದೆ.

ಜನವರಿ 14 ರಂದು ಪ್ರಕರಣ ದಾಖಲಾದಾಗಿನಿಂದಲೂ ಬಂಧನದ ಭೀತಿಯಿಂದ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಹಗಲು-ರಾತ್ರಿ ಹುಡುಕಾಟ ನಡೆಸುತ್ತಿದ್ದು, ಕಳೆದ ರಾತ್ರಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಬೆಂಗಳೂರಿನ ಸಂಜಯ್ ನಗರದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಪರಿಶೀಲನೆಯ ವೇಳೆ ಆರೋಪಿ ಪತ್ತೆಯಾಗಿಲ್ಲ.

ಆರೋಪಿಯು ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇರುವುದರಿಂದ, ಪೊಲೀಸರು ರಾಜೀವ್ ಗೌಡ ಅವರ ಪಾಸ್‌ಪೋರ್ಟ್ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಈ ನಡುವೆ ರಾಜಕೀಯವಾಗಿಯೂ ಇವರಿಗೆ ಹೊಡೆತ ಬಿದ್ದಿದ್ದು, ಕೆಪಿಸಿಸಿ ಈಗಾಗಲೇ ಇವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.

ಈ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿರುವ ಮತ್ತೊಂದು ಅಂಶವೆಂದರೆ, ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅಂಚೆ ಮೂಲಕ ಬಂದಿರುವ ಆ್ಯಸಿಡ್ ದಾಳಿಯ ಬೆದರಿಕೆ ಪತ್ರ. ಈ ಸಂಬಂಧ ಈಗಾಗಲೇ ಎನ್‌ಸಿಆರ್ (NCR) ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ಶೀಘ್ರದಲ್ಲೇ ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.

Must Read