ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಐಸಿಸಿ ಟಿ20 ವಿಶ್ವಕಪ್ ಆಯೋಜನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಭದ್ರತಾ ಕಾರಣ ನೀಡಿ ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹಿಂದೆ ಸರಿದಿದ್ದು, ಇದೀಗ ನೆರೆಯ ಪಾಕಿಸ್ತಾನ ಕೂಡ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ತಮ್ಮ ತಂಡದ ಪಾಲ್ಗೊಳ್ಳುವಿಕೆಯ ಬಗ್ಗೆ ಅಸ್ಪಷ್ಟ ನಿಲುವು ತಳೆದಿದ್ದಾರೆ. “ಪಾಕಿಸ್ತಾನ ತಂಡ ಈ ವಿಶ್ವಕಪ್‌ನಲ್ಲಿ ಆಡಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ಪಾಕಿಸ್ತಾನ ಸರ್ಕಾರವೇ ತೆಗೆದುಕೊಳ್ಳಲಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳ ತೀರ್ಮಾನಕ್ಕಾಗಿ ನಾವು ಕಾಯುತ್ತಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಪಂದ್ಯಗಳನ್ನು ಆಡಲು ಭದ್ರತೆಯ ಆತಂಕ ವ್ಯಕ್ತಪಡಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಪಂದ್ಯಗಳನ್ನು ಬೇರೆಡೆ ಸ್ಥಳಾಂತರಿಸಲು ಐಸಿಸಿಗೆ ಮನವಿ ಮಾಡಿತ್ತು. ಆದರೆ ಜನವರಿ 21ರಂದು ನಡೆದ ಸಭೆಯಲ್ಲಿ ಐಸಿಸಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣ, ಬಾಂಗ್ಲಾ ತಂಡ ಟೂರ್ನಿಯಿಂದ ಹಿಂದೆ ಸರಿಯಿತು. ಇದರ ಪರಿಣಾಮವಾಗಿ ಬಾಂಗ್ಲಾದೇಶದ ಬದಲು ಸ್ಕಾಟ್ಲೆಂಡ್ ತಂಡಕ್ಕೆ ವಿಶ್ವಕಪ್‌ನಲ್ಲಿ ಸ್ಥಾನ ನೀಡಲಾಗಿದೆ.



