ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ನಕ್ಸಲರು ನಾಳೆ ಶರಣಾಗುವ ಸಾಧ್ಯತೆ ಇದ್ದು, ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ನಾಳೆ 6 ನಕ್ಸಲರು ಶರಣಾಗತಿ ಆದ್ರೆ ಕರ್ನಾಟಕ ನಕ್ಸಲ್ ಮುಕ್ತ ಆಗುತ್ತೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈಗಾಗಲೇ ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಸದಸ್ಯರು ಕಾಡಿಗೆ ತೆರಳಿ ಮನವೋಲಿಸಿದ್ದಾರೆ. ಶಿವಮೊಗ್ಗದ ಶ್ರೀಪಾಲ್ ಸೇರಿ ಹಲವರು ನಕ್ಸಲರನ್ನ ಕಾಡಿನಲ್ಲಿ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆ್ಯಕ್ಟಿವ್ ಆಗಿದ್ದ ನಕ್ಸಲರನ್ನ ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಕಾಡಿನೊಳಗೆ ಭೇಟಿಯಾಗಿ ಸಭೆ ನಡೆಸಿದ್ದಾರೆ.
ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ), 2. ವನಜಾಕ್ಷಿ (ಬಾಳೆಹೊಳೆ ಕಳಸ), 3. ಸುಂದರಿ (ಕುಂತಲೂರು ದಕ್ಷಿಣ ಕನ್ನಡ), 4. ಮಾರಪ್ಪ ಅರೋಳಿ (ರಾಯಚೂರು). 5. ವಸಂತ ಟಿ (ತಮಿಳುನಾಡು)., 6. ಎನ್. ಜೀಶಾ (ಕೇರಳ) ಈ 6 ಮಂದಿ ನಕ್ಸಲರು ಈಗಾಗಲೇ ಶಾಂತಿಗಾಗಿ ನಾಗರಿಕ ವೇದಿಕೆಗೆ ಶರಣಾಗತಿ ಪತ್ರ ನೀಡಿದ್ದು, ನಾಳೆ ಸಂಜೆ ವೇಳೆಗೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ.
ಚಿಕ್ಕಮಗಳೂರಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಪ್ರತಿಕ್ರಿಯಿಸಿದ್ದು, ಸರ್ಕಾರ ನಮ್ಮ ಬೇಡಿಕೆಗೆ ಒಪ್ಪಿರುವ ಹಿನ್ನೆಲೆ ಶರಣಾಗುತ್ತಿದ್ದೇವೆ. ನಾವು ಸಮಾಜದ ಮುಖ್ಯವಾಹಿನಿಗೆ ಬರುತ್ತೇವೆ. ನಮ್ಮ ಬೇಡಿಕೆಯನ್ನ ಎರಡು ಸಮಿತಿ ಸರ್ಕಾರಕ್ಕೆ ತಲುಪಿಸಿದೆ. ನಾವು ಪ್ರಜಾತಾಂತ್ರಿಕ ಸಾಂವಿಧಾನಿಕ ಹೋರಾಟ ಮಾಡುತ್ತೇವೆ. ಕೊನೆ ವರೆಗೂ ಜನರ ಪರ ನಿಂತು ಹೋರಾಟ ಮಾಡುತ್ತೇವೆ. ಯಾವ ಕಾರಣಕ್ಕೂ ಜನಪರ ಹೋರಾಟದಿಂದ ಹಿಂದೆ ಸರಿಯಲ್ಲ. ನಮ್ಮ ಉಸಿರು ಇರುವವರೆಗೂ ನಾವು ಹೋರಾಟ ಮಾಡುತ್ತೇವೆ.ನಾವೆಲ್ಲರೂ ನಾಳೆ ನಿಮ್ಮ ಮುಂದೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದರು.