Saturday, January 24, 2026
Saturday, January 24, 2026
spot_img

ಮಳೆ ಬಂದರೂ ನಿಲ್ಲದ ಭಾರತದ ವಿಜಯ ಓಟ: ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಅಂಡರ್-19 ವಿಶ್ವಕಪ್ 2026ರಲ್ಲಿ ಭಾರತದ ಯುವ ಕ್ರಿಕೆಟ್ ತಂಡವು ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ, ಸುಲಭ ಜಯ ಸಾಧಿಸುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆ ರವಾನಿಸಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತದ ನಿರ್ಧಾರ ಸರಿಯೆಂದು ಬೌಲರ್‌ಗಳು ಸಾಬೀತುಪಡಿಸಿದರು. ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನು ತಲಾ 37 ಓವರ್‌ಗಳಿಗೆ ನಿಗದಿಪಡಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ ಕೇವಲ 135 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಆರ್.ಎಸ್. ಅಂಬ್ರಿಸ್ 4 ವಿಕೆಟ್ ಪಡೆದು ಕಿವೀಸ್ ಬೆನ್ನೆಲುಬು ಮುರಿದರು. ಅವರಿಗೆ ಸಾಥ್ ನೀಡಿದ ಹೆನಿಲ್ ಪಟೇಲ್ 3 ವಿಕೆಟ್ ಕಬಳಿಸಿದರು. ಉಳಿದಂತೆ ಖಿಲನ್ ಪಟೇಲ್, ಮೊಹಮ್ಮದ್ ಇನಾನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಒಂದು ವಿಕೆಟ್ ಹಂಚಿಕೊಂಡರು. ನ್ಯೂಜಿಲೆಂಡ್ ಪರ ಕ್ಯಾಲಮ್ ಸ್ಯಾಮ್ಸನ್ (37*) ಮತ್ತು ಸೆಲ್ವಿನ್ ಸಂಜಯ (28) ಮಾತ್ರ ಅಲ್ಪ ಹೋರಾಟ ತೋರಿದರು.

ಸ್ವಲ್ಪವೂ ಒತ್ತಡಕ್ಕೆ ಒಳಗಾಗದೆ 136 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಸ್ಫೋಟಕ ಆರಂಭ ನೀಡಿದರು.

ವೈಭವ್ ಸೂರ್ಯವಂಶಿ: 23 ಎಸೆತಗಳಲ್ಲಿ 40 ರನ್ (2 ಬೌಂಡರಿ, 3 ಸಿಕ್ಸರ್).

ಆಯುಷ್ ಮ್ಹಾತ್ರೆ: 27 ಎಸೆತಗಳಲ್ಲಿ 53 ರನ್ (2 ಬೌಂಡರಿ, 6 ಸಿಕ್ಸರ್).

ಇವರಿಬ್ಬರು ಎರಡನೇ ವಿಕೆಟ್‌ಗೆ ಕೇವಲ 39 ಎಸೆತಗಳಲ್ಲಿ 76 ರನ್‌ಗಳ ಅಬ್ಬರದ ಜೊತೆಯಾಟವಾಡಿ ಗೆಲುವನ್ನು ಖಚಿತಪಡಿಸಿದರು. ನಂತರ ಬಂದ ವಿಹಾನ್ ಮಲ್ಹೋತ್ರಾ (17) ಮತ್ತು ವೇದಾಂತ್ ತ್ರಿವೇದಿ (13) ಅಜೇಯರಾಗಿ ಉಳಿದು, ತಂಡವನ್ನು 13.3 ಓವರ್‌ಗಳಲ್ಲೇ ಗುರಿ ತಲುಪಿಸಿದರು. ಈ ಮೂಲಕ ಭಾರತ 7 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಅಜೇಯವಾಗಿ ಮುನ್ನುಗ್ಗುತ್ತಿದೆ.

Must Read