July 16, 2026
Thursday, July 16, 2026
spot_img

ಪತ್ನಿ ನೇಣಿಗೆ ಶರಣಾಗುತ್ತಿದ್ದರೂ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ನಿಂತ ಪತಿ! ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಆಕೆಯನ್ನು ರಕ್ಷಿಸುವ ಬದಲು, ಪತಿಯು ಆ ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಘೋರ ಘಟನೆಯೊಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ, ರೈಲ್ವೆ ಇಲಾಖೆಯಲ್ಲಿ ಲೋಕೋ ಪೈಲಟ್ ಆಗಿ ಕೆಲಸ ಮಾಡುತ್ತಿರುವ ಶ್ರೀರಾಮ್ ಶ್ರೀನಿವಾಸ್ ಹಾಗೂ ಆತನ ಪತ್ನಿ ಕೃಷ್ಣವೇಣಿ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆದಿದೆ. ಈ ಕಲಹ ವಿಕೋಪಕ್ಕೆ ಹೋಗಿ, ಕೃಷ್ಣವೇಣಿ ನೇಣು ಬಿಗಿದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಪತ್ನಿಯ ಪ್ರಾಣ ಉಳಿಸಬೇಕಿದ್ದ ಶ್ರೀನಿವಾಸ್, ಅದನ್ನು ಗಂಭೀರವಾಗಿ ಪರಿಗಣಿಸದೆ “ನೀನು ನೇಣು ಹಾಕಿಕೊಳ್ಳುತ್ತಿರುವುದು ಸರಿಯಿಲ್ಲ, ಹೀಗೆ ಮಾಡಬೇಕು” ಎಂದು ಸೂಚನೆ ನೀಡುತ್ತಾ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.

ಕೃಷ್ಣವೇಣಿ ಕೇವಲ ಬೆದರಿಸಲು ಹೀಗೆ ಮಾಡುತ್ತಿದ್ದಾಳೆ ಎಂದು ಭಾವಿಸಿದ್ದ ಶ್ರೀನಿವಾಸ್, ಸಾವಿನ ಕ್ಷಣಗಳನ್ನು ತಮಾಷೆಯಾಗಿ ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ. ಆದರೆ, ನೋಡನೋಡುತ್ತಿದ್ದಂತೆಯೇ ಕೃಷ್ಣವೇಣಿ ಸಾವನ್ನಪ್ಪಿದ್ದಾರೆ. ಪತ್ನಿ ಪ್ರಾಣ ಬಿಟ್ಟ ನಂತರ ಪರಿಸ್ಥಿತಿಯ ಗಂಭೀರತೆ ಅರಿತ ಪತಿ ಕಂಗಾಲಾಗಿದ್ದಾನೆ.

ಘಟನೆಯ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಕೃಷ್ಣವೇಣಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಾನವೀಯತೆ ಮರೆತು ಪತ್ನಿಯ ಸಾವನ್ನು ಚಿತ್ರೀಕರಿಸಿದ ಪತಿ ಶ್ರೀರಾಮ್ ಶ್ರೀನಿವಾಸ್‌ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !