ಖಾರ–ಹುಳಿ–ಸುವಾಸನೆಯ ಪರಿಪೂರ್ಣ ಮಿಶ್ರಣವೇ ಪುಳಿಯೋಗರೆ. ಆದರೆ ಪ್ರತಿಸಾರಿ ಒಂದೇ ರೀತಿ ಮಾಡಿದರೆ ಬೋರ್ ಆಗುತ್ತೆ ಅಲ್ವಾ? ಹಾಗಾಗಿ ಇವತ್ತು ಸ್ವಲ್ಪ ಆಂಧ್ರ ಸ್ಟೈಲ್ ಟಚ್ ಇರುವ, ಪುಳಿಯೋಗರೆ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಅನ್ನ – 1 ಕಪ್
ಹುಣಸೆ ಹಣ್ಣು – ನೆನೆಸಿ ಪೇಸ್ಟ್ ಮಾಡಿಕೊಂಡದ್ದು
ಎಣ್ಣೆ – ಎಳ್ಳೆಣ್ಣೆ ಅಥವಾ ಶೇಂಗಾ ಎಣ್ಣೆ
ಸಾಸಿವೆ
ಉದ್ದಿನ ಬೇಳೆ
ಕಡಲೆ ಬೇಳೆ
ಒಣ ಮೆಣಸಿನಕಾಯಿ
ಕರಿಬೇವು
ಹಿಂಗು
ಉಪ್ಪು – ರುಚಿಗೆ ತಕ್ಕಂತೆ
ಪುಡಿ ಮಾಡಲು:
ಒಣ ಕೆಂಪು ಮೆಣಸಿನಕಾಯಿ
ಧನಿಯಾ ಬೀಜ
ಮೆಂತ್ಯ ಬೀಜ (ಸ್ವಲ್ಪ ಮಾತ್ರ)
ಎಳ್ಳು
ಶೇಂಗಾ ಬೀಜ
ಮಾಡುವ ವಿಧಾನ
ಮೊದಲು ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ಪಾತ್ರೆಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಬಿಸಿಮಾಡಿ. ಸಾಸಿವೆ ಹಾಕಿ ನಂತರ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಒಣ ಮೆಣಸಿನಕಾಯಿ, ಕರಿಬೇವು ಮತ್ತು ಸ್ವಲ್ಪ ಹಿಂಗು ಹಾಕಿ ಸುವಾಸನೆ ಬರಲು ಬಿಡಿ.
ಈಗ ಹುಣಸೆ ಪೇಸ್ಟ್ ಸೇರಿಸಿ, ಉಪ್ಪು ಹಾಕಿ. ಮಧ್ಯಮ ಉರಿಯಲ್ಲಿ ಎಣ್ಣೆ ಮೇಲಕ್ಕೆ ತೇಲುವವರೆಗೂ ಚೆನ್ನಾಗಿ ಕುದಿಸಬೇಕು. ಆಂಧ್ರ ಸ್ಟೈಲ್‌ನ ವಿಶೇಷತೆ ಅಂದ್ರೆ ಈ ಹಂತದಲ್ಲಿ ಮಸಾಲಾ ಚೆನ್ನಾಗಿ ಬೇಯಬೇಕು, ಹಸಿ ವಾಸನೆ ಇರಬಾರದು.
ಇನ್ನೊಂದು ಕಡೆ, ಹೇಳಿದ ಸಾಮಗ್ರಿಗಳನ್ನು ಎಣ್ಣೆ ಇಲ್ಲದೆ ಹುರಿದು, ತಣ್ಣಗಾದ ಮೇಲೆ ಒರಟಾಗಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಕುದಿಯುತ್ತಿರುವ ಹುಣಸೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ, ಎರಡು ನಿಮಿಷ ಕುದಿಸಿ ಉರಿ ಆರಿಸಿ.
ಇದೀಗ ಈ ಮಸಾಲಾವನ್ನು ತಣ್ಣಗಾದ ಅನ್ನಕ್ಕೆ ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಮೃದುವಾಗಿ ಕಲಸಿ. ಕೈಯಿಂದ ಕಲಿಸಿದರೆ ರುಚಿ ಇನ್ನೂ ಚೆನ್ನಾಗಿರುತ್ತೆ. ಕೊನೆಗೆ ಮೇಲೆ ಸ್ವಲ್ಪ ಎಳ್ಳೆಣ್ಣೆ ಹಾಕಿದ್ರೆ ಆಂಧ್ರ ಸ್ಟೈಲ್ ಟಚ್ ಪಕ್ಕಾ



