ಹೊಸದಿಗಂತ ವಿಜಯಪುರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಸಿಎಂ ಕುರ್ಚಿ ಮೇಲೆ ಯಾವಾಗ ಕೂರುತ್ತೇನೆ ಎಂಬ ಚಿಂತೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಾವಿನ ಮನೆಯಾಗಿದೆ. ಬಾಣಂತಿಯರ ಸಾವು ನಿಂತಿಲ್ಲ, ಹಸುಗೂಸಿನ ಸಾವಿನ ಕಾರಣ ಇನ್ನೂ ವರೆಗೂ ಪತ್ತೆಯಾಗಿಲ್ಲ ಎಂದು ದೂರಿದರು.
2800 ಕ್ಕೂ ಅಧಿಕ ರೈತರು ಒಂದು ವರೆ ವರ್ಷದಲ್ಲಿ ಸಾವನಪ್ಪಿದ್ದಾರೆ. ಅಧಿಕಾರಿಗಳು ಗುತ್ತಿಗೆದಾರರು ಸಾಯುತ್ತಿದ್ದಾರೆ. ಕರ್ನಾಟಕ ಸಾವಿನ ಮನೆಯಾದರೂ ಕಾಂಗ್ರೆಸ್ ನವರು ಕಲ್ಲು ಹೃದಯ ಹೊಂದಿದ ಹಾಗೆ ಸಂವೇಧನೆ ಇಲ್ಲದ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿನ್ನರ್ ಪಾಲಿಟಿಕ್ಸ್ ಕಾಂಗ್ರೆಸ್ ನವರು ನಡೆಸುತ್ತಿದ್ದಾರೆ. ಸ್ವಲ್ಪವಾದರೂ ಕಾಂಗ್ರೆಸ್ ನವರಿಗೆ ಕರುಣೆ ಇದ್ದರೆ ಬಡ ಬಾಣಂತಿಯರ ಸಾವಿಗೆ ಕಾರಣ ಪತ್ತೆ ಹಚ್ಚಬೇಕಿದೆ. ಸಂವೇಧನೆ ಕಳೆದುಕೊಂಡ ಸಿಎಂ, ಕಲ್ಲು ಹೃದಯದ ಸಿಎಂ ಇವರಾಗಿದ್ದಾರೆ ಎಂದು ಕಿಡಿಕಾರಿದರು.
ಸಾವಿಗೆ ಕಾರಣ ಪತ್ತೆ ಹಚ್ಚಲು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಸತ್ತಿರುವರೆಲ್ಲರೂ ಬಡವರು, ದಲಿತರು. ಹಣದ ದಾಹಕ್ಕೆ ಒಳಗಾಗಿ ವೈದ್ಯರೇನಾದರೂ ನಿರ್ಲಕ್ಷ್ಯ ಮಾಡಿದ್ದಾರಾ ಎಂಬುದರ ತನಿಖೆಯಾಗಬೇಕು ಎಂದರು.
ಬಡವರು ಸತ್ತರೂ ನಡೆಯುತ್ತದೆ ಎಂದು ಕಲ್ಲು ಹೃದಯದ ಸರ್ಕಾರ ಇದಾಗಿದೆ. ತಕ್ಷಣ ಹಾಲಿ ನ್ಯಾಯಾಧೀಶರು ನೇತೃತ್ವದಲ್ಲಿ ಕಮಿಟಿ ಮಾಡಬೇಕು. ಒಂದು ವಾರದೊಳಗೆ ಕಮಿಟಿ ರಚನೆ ಮಾಡಬೇಕು. ಸತ್ತವರದ್ದು ಎಷ್ಟು ಜನರದ್ದು ಪೊಸ್ಟ್ ಮಾಟಮ್ ಮಾಡಿದ್ದೀರಾ ಸ್ಪಷ್ಟಪಡಿಸಬೇಕು ಎಂದರು.
ಡಿನ್ನರ್ ಪಾಲಿಟಿಕ್ಸ ಆಮೇಲೆ ಬೇಕಾದರೆ ಮಾಡಿಕೊಳ್ಳಿ. ಅತಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಸಾಲಿಗೆ ಕರ್ನಾಟಕ ಸೇರಿಕೊಂಡಿದೆ. ಅಂಗನವಾಡಿ, ಆಶಾ ಕಾರ್ಯಕರ್ತರು ಧರಣಿ ಮಾಡುತ್ತಿದ್ದಾರೆ, ಇವೆಲ್ಲವನ್ನು ನಿರ್ಲಕ್ಷ ವಹಿಸುವ ಕೆಲಸ ಮಾಡಬಾರದು ಎಂದರು.
ಒಂದುವರೆ ವರ್ಷದಲ್ಲಿ ಗುತ್ತಿಗೆದಾರರ ಬಿಲ್ ಇನ್ನೂ ವರೆಗೂ ಕೊಟ್ಟಿಲ್ಲ. ಆತ್ಮ ಸಾಕ್ಷಿ ಇದ್ದವರಿಗೆ ಸಾಕ್ಷಿ ಬೇಡವೇ, ವರ್ಕ್ ಆರ್ಡರ್ ತಗೆದೆಕೊಳ್ಳಲು ಶೇ. 34 ಕೊಡಬೇಕು. ಎನ್ ಒ ಸಿ ತಗೆದುಕೊಳ್ಳಲು ಶೇ. 10 ರಿಂದ 12 ಕೊಡಬೇಕು. ಜಿ ಎಸ್ ಟಿ ಶೇ. 18 ಇದೆಲ್ಲ ನೋಡಿದರೆ ಗುತ್ತಿಗೆದಾರರು ಪರಿಸ್ಥಿತಿ ಏನು ? ಆಗಬೇಕು ಎಂದರು.
ಕೆಲ ನಿಷ್ಟಾವಂತ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು, ಅಧಿಕಾರಿಗಳ ಸಾವು ಮುಂದುವರೆದಿದೆ, ಇತ್ತೀಚೆಗೆ ಗದಗ್ ನಲ್ಲಿ ಒಬ್ಬ ನಿರ್ಮಿತಿ ಕೇಂದ್ರದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ. ಆದರೆ ಡಿನ್ನರ್ ಪಾಲಿಟಿಕ್ಸ ಹಾಗೂ ಸೇಡಿನ ರಾಜಕಾರಣ ಇವರು ಮಾಡುತ್ತಿದ್ದಾರೆ ಎಂದರು.
ಹಗರಣಗಳು ಸಾಧನೆ ಆಗಲ್ಲ, ಭ್ರಷ್ಟಾಚಾರವೇ ಇವರ ಸಾಧನೆನಾ?, ಇಂತಹ ಸಂಕಷ್ಟದ ಸಮಯದಲ್ಲಿ ಅಧಿಕಾರದ ಹಪಾಹಪಿ ನಡೆಯುತ್ತದೆ ಎಂದರು.
ಜೆಡಿಎಸ್ ಶಾಸಕರನ್ನು ಸೆಳೆಯಲು ಡಿಕೆಶಿ ತಂತ್ರ ವಿಚಾರಕ್ಕೆ ಪ್ರತಿಕ್ರಯಿಸಿ, ಉಹಾಪೋಹದ ಮೇಲೆ ನನಗೇನು ಮಾಹಿತಿ ಇಲ್ಲ. ನೋಡೋಣ ಏನೇನು ಆಗತ್ತೆ ಎಂದರು.
ಈಗ ಜನರ ಮನಸ್ಸಿನಿಂದ ಕಾಂಗ್ರೆಸ್ ದೂರ ಹೋಗಿದೆ. ಯಾರನ್ನು ಸೆಳೆದರು ಜನರ ಮನಸ್ಸಲ್ಲಿ ಅವರ ಭ್ರಷ್ಟಾಚಾರ, ಬೆಲೆ ಏರಿಕೆ ಅಳಿಸಲು ಸಾಧ್ಯವಿಲ್ಲ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.