ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು ಎರಡು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಭೀಕರ ದರೋಡೆಯೊಂದು ಈಗ ರಾಜ್ಯಾದ್ಯಂತ ಸಂಚಲನ ಮೂಡಿಸುತ್ತಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ವ್ಯಾಪ್ತಿಯಲ್ಲಿ ಅಕ್ಟೋಬರ್ 2022ರಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ನಗದು ತುಂಬಿದ್ದ ಎರಡು ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ದಳ (SIT) ರಚಿಸಿದ್ದಾರೆ. ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರು ಜಂಟಿಯಾಗಿ ಕಂಟೇನರ್‌ಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್, “ಮಹಾರಾಷ್ಟ್ರ ಪೊಲೀಸರು ನಮಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ ಪ್ರಕರಣವು ಎರಡು ವರ್ಷ ಹಳೆಯದಾಗಿದ್ದು, ನಮ್ಮ ಇಲಾಖೆಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ದರೋಡೆಯು ಆರಂಭಿಕ ಹಂತದ ತನಿಖೆಯಲ್ಲಿದೆ. ಮಹಾರಾಷ್ಟ್ರ ಪೊಲೀಸರು ಕರ್ನಾಟಕದ ಸಹಕಾರ ಕೋರಿದ್ದಾರೆ. ನಮಗೆ ಅಧಿಕೃತ ಮಾಹಿತಿ ಮತ್ತು ಸಾಕ್ಷ್ಯಗಳು ದೊರೆತ ತಕ್ಷಣ, ನಮ್ಮ ಪೊಲೀಸರು ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ,” ಎಂದು ತಿಳಿಸಿದ್ದಾರೆ.



