ಹೊಸದಿಗಂತ ವರದಿ ಮಂಡ್ಯ :
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ಮತ್ತು ಗೋವು ವಿರೋಧಿ ನೀತಿ ಖಂಡಿಸಿ ಬಿಜೆಪಿ ಪಕ್ಷದ ರೈತ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ‌್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಪ್ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಜಮೀರ್ ಅಹಮದ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಭಾವಚಿತ್ರದ ಮುಖವಾಡಕ್ಕೆ ಸಗಣಿ ಬಳಿಯುವಾಗ ಪೊಲೀಸರು ತಡೆಯಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಭಾರತೀಯ ಸಂಸ್ಕೃತಿಯಲ್ಲಿ ಗೋವು ಆಧಾರಿತ ಕೃಷಿ ಬಹು ಮುಖ್ಯವಾದ ವಿಚಾರ ವಾಗಿದೆ,ಗೋವು, ಮುನುಷ್ಯ ಹಾಗೂ ಪ್ರಕೃತಿಗೆ ಅವಿನಾಭಾವ ಸಂಬಂಧ ಇದ್ದು ಭಾರತೀಯ ಪರಂಪರೆಯಲ್ಲಿ ಗೋ ಮಾತೆಗೆ ತನ್ನದೆ ಆದ ವಿಶಿಷ್ಟ ಸ್ಥಾನವಿದೆ. ದೇಶದಲ್ಲಿ ಕೃಷಿ ಉಳಿದಿದ್ದರೆ,ಅದು ಗೋ ಮಾತೆಯ ಕಾಣಿಕೆ ಯಾಗಿದೆ ಆದರೆ ರಾಜ್ಯದ ಕೋಟ್ಯಾಂತರ ಜನರ ಭಾವನೆಗಳೊಂದಿಗೆ ಬೆರೆತಿರುವ ಗೋ ಮಾತೆಯನ್ನು ಸಂರಕ್ಷಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಸಡ್ಡೆ ತೋರ್ಪಡಿಸುತ್ತಿದೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಹಸುವಿನ ಕೆಚ್ಚಲು ಕತ್ತರಿಸಿರುವ ಪ್ರಕರಣದಲ್ಲಿ ದೊಡ್ಡ ಗ್ಯಾಂಗ್ ಕೈವಾಡವಿದೆ ಆದರೆ ಪೊಲೀಸ್ ಇಲಾಖೆ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಬಂಧಿಸಿ ಕಸ್ಟಡಿಗೂ ಪಡೆಯದೆ ಏಕಾಏಕಿ ಜೈಲಿಗಟ್ಟಿರುವುದು ಹಲವು ಅನುಮಾನ ಮೂಡಿಸುತ್ತಿದೆ, ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ದುರುಳರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.