ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಿಂದ ಹೊರಡುವಾಗ ಬೀಗ ಹಾಕಿ ಕೀಯನ್ನು ಶೂ ಒಳಗೆ, ಕಿಟಕಿ ಬಳಿ, ಹೂವಿನ ಕುಂಡದ ಬಳಿ ಹಾಗೂ ಡೋರ್ ಮ್ಯಾಟ್ ಅಡಿಗೆ ಬಚ್ಚಿಡುವ ಅಭ್ಯಾಸ ಇದೆಯಾ? ಹಾಗಿದ್ರೆ ಈ ಸುದ್ದಿ ಓದಿ..
ಮನೆಯವರು ಕೀ ಇಡುವ ಜಾಗಗಳನ್ನು ನೋಡಿ ಕನ್ನ ಹಾಕುವ ಕಳ್ಳರನ್ನು ನಗರ ಪೊಲೀಸರು ಬಂಧನಕ್ಕೊಳಪಡಸಿದ್ದಾರೆ. ಸಾಮಾನ್ಯವಾಗಿ ಮನೆಗಳಲ್ಲಿ ಬಳಸುವ ಇಂತಹ ರಹಸ್ಯ ತಂತ್ರವನ್ನೇ ಬಂಡಾವಳ ಮಾಡಿಕೊಳ್ಳುತ್ತಿರುವ ಕಳ್ಳರು, ಹಾಡುಹಗಲೇ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ.
ನಗರದಲ್ಲಿ ವರದಿಯಾಗಿರುವ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಸಾಫ್ಟ್‌ವೇರ್ ಇಂಜಿನಿಯರ್ ಕೆ ಮೂರ್ತಿ, ಹೆಣ್ಣೂರು ನಿವಾಸಿ ಜಯಂತಿ ಎಂದು ಗುರುತಿಸಲಾಗಿದೆ.
ಬೊಮ್ಮನಹಳ್ಳಿ ನಿವಾಸಿಯಾಗಿರುವ ಮೂರ್ತಿ ಬಿಸಿಎ ಪದವಿ ಪಡೆದಿದ್ದು, ಎರಡು ವರ್ಷಗಳಿಂದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ, ಆನ್‌ಲೈನ್ ಜೂಜಿನ ಚಟಕ್ಕೆ ಬಿದ್ದಿದ್ದ ಆರೋಪಿ, ತನ್ನ ಎಲ್ಲಾ ಗಳಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದ. ಬಳಿಕ ಕೆಲಸ ಬಿಟ್ಟು ಕಳ್ಳತನ ಮಾಡತೊಡಗಿದ. ಇದೀಗ ಈತನನ್ನು ಬಂಧಿಸಿದ ಬೇಗೂರು ಪೊಲೀಸರು, ಆತನಿಂದ 18.53 ಲಕ್ಷ ಮೌಲ್ಯದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.