ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ನೋಡುತ್ತಾ ನಿಂತು ಫೋನ್ನಲ್ಲಿ ವಿಡಿಯೋ ಮಾಡಬೇಡಿ. ಬದಲಾಗಿ ಅವರಿಗೆ ಫಸ್ಟ್ ಏಡ್ ಅಥವಾ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿ. ಇದರಿಂದ ನಿಮಗೆ ಪುಣ್ಯದ ಜೊತೆ ಹಣವೂ ಸಿಗಲಿದೆ.
ಹೌದು, ಗೋಲ್ಡನ್ ಅವರ್ನಲ್ಲಿ ಅಪಘಾತ ಸಂಭವಿಸಿದ ವ್ಯಕ್ತಿಯನ್ನು ಉಳಿಸಲು ಸಹಕರಿಸಿದ ವ್ಯಕ್ತಿಗೆ ಬಹುಮಾನ ನೀಡಲಾಗುತ್ತದೆ. ಅಷ್ಟಕ್ಕೂ ಗೋಲ್ಡನ್ ಅವರ್ ಅಂದರೇನು? ಯಾವುದೇ ವ್ಯಕ್ತಿಗೆ ಅಪಘಾತವಾದ ನಂತರದ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎನ್ನುತ್ತಾರೆ. ಅಪಘಾತದ ನಂತರ ಒಂದೊಂದು ನಿಮಿಷವೂ ಅವರಿಗೆ ಮುಖ್ಯವಾಗಿರುತ್ತದೆ. ಕೆಲವೇ ನಿಮಿಷದ ಅಂತರದಲ್ಲಿ ಪ್ರಾಣ ಹೋಗಲೂಬಹುದು, ಉಳಿಯಲೂಬಹುದು.
ಗೋಲ್ಡನ್ ಅವರ್ ಪರಿಕಲ್ಪನೆಯನ್ನು 1960ರಲ್ಲಿ ಡಾ.ಆಡಮ್ ಕೌಲಿ ಪರಿಚಯ ಮಾಡಿದರು. ಅವರು ಜೀವ ಉಳಿಸುವ ವಿಷಯದಲ್ಲಿ ಮೊದಲ 60 ನಿಮಿಷಗಳು ಎಷ್ಟು ಮುಖ್ಯ ಎಂಬುದರ ಬಗ್ಗೆ ತಿಳಿಸಿದ್ದರು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ದೇಹವು ಬದಲಾಯಿಸಲಾಗದ ತುಂಬಾ ಹಾನಿ ಅನುಭವಿಸಬಹುದು. ಈ ತತ್ವವು ರಸ್ತೆ ಅಪಘಾತಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಬದಲಾಗಿ ಪಾರ್ಶ್ವವಾಯು ಅಥವಾ ತೀವ್ರ ಆಘಾತದಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ತುಂಬಾ ಪ್ರಮುಖವಾದ ಪಾತ್ರವಹಿಸುತ್ತದೆ. ಅಲ್ಲಿ ಸಮಯವು ಹೆಚ್ಚು ನಿರ್ಣಾಯಕವಾಗಿರುತ್ತದೆ.
ಗೋಲ್ಡನ್ ಅವರ್ ಅವಧಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವುದು ಅನಿವಾರ್ಯವಲ್ಲ. ಆದರೆ, ಹತ್ತಿರದ ಯಾವುದೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದರೆ ಉತ್ತಮ ಎನ್ನುವುದನ್ನು ಮರೆಯಬಾರದು. ಭಾರತದಲ್ಲಿ ಮುಖ್ಯವಾದ ಸಮಸ್ಯೆ ಏನೆಂದರೆ, ರಸ್ತೆ ಅಪಘಾತಗಳು ನಡೆದ ಅವಧಿ, ಜನಸಂದಣಿ ಇರುತ್ತದೆ. ಈ ರೀತಿ ದಟ್ಟಣೆ ಸಂಭವಿಸಬಾರದು. ಇದರಿಂದ ರೋಗಿಗೆ ಚಿಕಿತ್ಸೆ ದೊರೆಯುವಲ್ಲಿ ವಿಳಂಬವಾಗುತ್ತದೆ. ಈ ಸಂದರ್ಭಗಳಲ್ಲಿ ಅನೇಕ ಬಾರಿ ರೋಗಿಯು ತನ್ನ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ನಾಗ್ಪುರದಲ್ಲಿ ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ‘ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವವರಿಗೆ ಬಹುಮಾನದ ನಗದನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಲಾಗಿದೆ. ಅಪಘಾತದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುವ ಜನರಿಗೆ ₹25,000 ನಗದು ಬಹುಮಾನ ನೀಡಲಾಗುವುದು. ಇದು ಈಗಿರುವ ಬಹುಮಾನಕ್ಕಿಂತ ಐದು ಪಟ್ಟು ಹೆಚ್ಚಳ ಆಗಲಿದೆ.
ಅಪಘಾತದ ನಂತರದ ನಿರ್ಣಾಯಕ ಗೋಲ್ಡನ್ ಅವರ್ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವವರಿಗೆ ಈಗಿರುವ ₹5,000 ನಗದು ಬಹುಮಾನ ಸಾಕಾಗುವುದಿಲ್ಲ ಎಂದು ಗಡ್ಕರಿ ತಿಳಿಸಿದ್ದರು. ‘ಅಪಘಾತಗಳಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಮೊದಲ ಏಳು ದಿನಗಳವರೆಗೆ ಸರ್ಕಾರವು ₹1.5 ಲಕ್ಷ ರೂಪಾಯಿವರೆಗಿನ ಆಸ್ಪತ್ರೆ ವೆಚ್ಚವನ್ನು ಭರಿಸಲಿದೆ’ ಎಂದ ಗಡ್ಕರಿ ಅವರು, ‘ತಮ್ಮ ಸರ್ಕಾರ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ’ ಎಂದು ಅವರು ಹೇಳಿದ್ದರು.