ಹೊಸ ದಿಗಂತ ವರದಿ,ಕುಶಾಲನಗರ:
ಮೇಯಲು ಬಿಟ್ಟಿದ್ದ ಹಸು ಹಾಗೂ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಪ್ರಕಾಶ್ ಎಂಬವರಿಗೆ ಸೇರಿದ ಹಸು ಮತ್ತು ಒಂದು ಗಂಡು ಕರುವಿನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.
ಎಂದಿನಂತೆ ಮನೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಮೇಯಲು ಹೋದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದ್ದು, ಒಂದು ಹಸುವಿನ ಹಿಂಬದಿಯ ತೊಡೆಯ ಹತ್ತಿರದ ಗಾಯಗೊಳಿಸಿದೆ. ಇನ್ನೊಂದು ಕರುವಿನ ಕುತ್ತಿಗೆಯ ಭಾಗಕ್ಕೆ ಗಾಯವಾಗಿದೆ.
ವಿಷಯವನ್ನು ಪ್ರಕಾಶ್ ಅವರು ಅರಣ್ಯ ಇಲಾಖೆಗೆ ತಿಳಿಸಿದ ತಕ್ಷಣವೇ ಸಂಚಾರಿ ಪಶುಪಾಲನಾ ಇಲಾಖೆಯ ಚಿಕಿತ್ಸಾ ವಾಹನದಲ್ಲಿ ಸಿಬ್ಬಂದಿಗಳು ಬಂದು ತಾತ್ಕಾಲಿಕ ಚಿಕಿತ್ಸೆ ನೀಡಿರುತ್ತಾರೆ.
ಹಸುಗಳ ಮಾಲಕ ಪ್ರಕಾಶ್, ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿಯವರಿಗೆ ದೂರು ನೀಡಿದ್ದು, ಸ್ಧಳಕ್ಕೆ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಅನಂತ, ಜಯಶೀಲಾ, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.