ಮಂಗಳೂರು ಬ್ಯಾಂಕ್ ದರೋಡೆ | ತನಿಖೆಯ ಹಾದಿ ತಪ್ಪಿಸೋಕೆ ಮಾಸ್ಟರ್ ಪ್ಲಾನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೀದರ್ ದರೋಡೆ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ಬ್ಯಾಂಕಿನಲ್ಲಿ ಶುಕ್ರವಾರದಂದು ಮಟ ಮಟ ಮಧ್ಯಾಹ್ನವೇ ದರೋಡೆಕೋರರು ನುಗ್ಗಿ ಪಿಸ್ತೂಲು,ತಲವಾರು ತೋರಿಸಿ ಹನ್ನೆರಡು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ಸುಮಾರು ಏಳು ಲಕ್ಷದಷ್ಟು ನಗದನ್ನ ಲೂಟಿ ಹೊಡೆದಿದ್ದಾರೆ.

ಇದೀಗ ಬ್ಯಾಂಕ್ ನ ಮಹಿಳಾ ಸಿಬ್ಬಂದಿಗಳ ಒಡವೆ ಎಗರಿಸದೆ ,ಸಿಸಿಟಿವಿ ಟೆಕ್ನೀಷಿಯನ್ ನ ಕೈ ಬೆರಳಿನ ಉಂಗುರವನ್ನು ಮಾತ್ರ ಕಿತ್ಕೊಂಡದ್ದು ತನಿಖೆಯ ಹಾದಿ ತಪ್ಪಿಸುವ ಷಡ್ಯಂತರವೇ ಎಂಬ ದಟ್ಟ ಅನುಮಾನಗಳು ಮೂಡಿವೆ.

ಈ ಶಾಖೆಯಲ್ಲಿರುವ ಕೋಟಿ ಬೆಳೆಬಾಳುವ ಚಿನ್ನಾಭರಣ ಕಾಯಲು ಓರ್ವ ಸೆಕ್ಯುರಿಟಿ ಗಾರ್ಡನ್ನೂ ನೇಮಿಸಿಲ್ಲ. ಬ್ಯಾಂಕ್ ಒಳ ಭಾಗದಲ್ಲಿ ನಾಲ್ಕು ಕ್ಯಾಮೆರಗಳಿದ್ದು ಒಳ ಹೊಕ್ಕುವ ಭಾಗದಲ್ಲಿ ಒಂದು ಕ್ಯಾಮೆರವನ್ನೂ ಅಳವಡಿಸಲಾಗಿಲ್ಲ. ಸಹಕಾರಿ ಸಂಘದ ಧುರೀಣರು ಹೇಳುವ ಪ್ರಕಾರ ದರೋಡೆ ನಡೆದ ದಿನದ ಹಿಂದೆ ಭಧ್ರತಾ ಕೋಶದ ಕ್ಯಾಮೆರ ಕೆಟ್ಟು ಹೋಗಿತ್ತಂತೆ.

ಶುಕ್ರವಾರ ಮಧ್ಯಾಹ್ನ‌ ಸಿಸಿಟಿವಿ ಟೆಕ್ನೀಷಿಯನ್ ಬಂದು ಕ್ಯಾಮೆರಾ ದುರಸ್ತಿಗೆ ಮುಂದಾದಾಗಲೇ ನಾಲ್ಕು ಜನ ಮುಸುಕುಧಾರಿ ಡಕಾಯಿತರು ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಒಳಗಡೆಗೆ ಎಂಟ್ರಿ ನೀಡಿದ್ದಾರೆ.

ಇದೇ ವೇಳೆ ಗ್ರಾಹಕನೋರ್ವ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಂಡು ಹೋಗಿದ್ದು ,ಲಾಕರ್ ತೆರೆಯಲಾಗಿತ್ತಂತೆ. ದರೋಡೆಕೋರರು ಒಳಗಿದ್ದ ನಾಲ್ವರು ಸಿಬ್ಬಂದಿ ,ಸಿಸಿಟಿವಿ ಟೆಕ್ನೀಷಿಯನನ್ನು ಮಾರಕಾಯುಧಗಳಿಂದ ಬೆದರಿಸಿ ಒತ್ತೆಯಾಳಾಗಿಸಿ ಲಾಕರ್ ನಿಂದ ಸುಮಾರು ಹನ್ನೆರಡು ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಕೈಗೆ ಸಿಕ್ಕ ಅಂದಾಜು ಹತ್ತು ಲಕ್ಷದಷ್ಟು ನಗದು ದೋಚಿ ಕಾರಿನಲ್ಲಿ ಪರಾರಿಯಾಗಿದ್ದರೆಂದು ಹೇಳಲಾಗಿತ್ತು.ಸುಮಾರು ಆರು ಕೋಟಿಯಷ್ಟು ಮೌಲ್ಯದ ದೊಡ್ಡ ಗಾತ್ರದ ಚಿನ್ನಾಭರಣಗಳನ್ನ ಕಬಾಟಿನಲ್ಲಿ ಇಟ್ಟಿದ್ದು ದರೋಡೆಕೋರರು ಅದನ್ನು ಹೊತ್ತೊಯ್ಯಲಾರದೆ ಅಲ್ಲೇ ಬಿಟ್ಟು ಹೋಗಿದ್ದರು.

ಟೆಕ್ನೀಷಿಯನ್ ಅವರ ಮೊಬೈಲನ್ನು ಹೊರತು ಪಡಿಸಿ ಉಳಿದೆಲ್ಲರ ಮೊಬೈಲ್ ಗಳನ್ನ ದರೋಡೆಕೋರರು ಹೊತ್ತೊಯ್ದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಸ್ಥಳೀಯರು ಮತ್ತು ಬ್ಯಾಂಕ್ ಗ್ರಾಹಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಒಳಗಡೆ ಏನಾಗಿದೆಯೆಂದು ಒಳಗಿದ್ದವರು ಬಿಟ್ಟು ಬೇರ್ಯಾರಿಗೂ ಗೊತ್ತಿಲ್ಲ. ಅಷ್ಟಕ್ಕೂ ಕೋಟೆಕಾರು ಬ್ಯಾಂಕಲ್ಲೇ ಶುಕ್ರವಾರದ ಮಧ್ಯಾಹ್ನ ದರೋಡೆಗಳೇಕೆ ಆಗುತ್ತಿವೆಯೆಂಬುದೇ ಸಾವಿರ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.

ದರೋಡೆಗೆ ಬಳಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದ ಫಿಯೆಟ್ ಕಾರು ತಲಪಾಡಿ ಟೋಲ್ ಹಾದು ಹೋಗಿರುವ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರದಲ್ಲಿ ದಾಖಲಾಗಿದೆ. ಕಾರಲ್ಲಿ ಚಾಲಕ ಮಾತ್ರ ಗೋಚರಿಸುತ್ತಿದ್ದು ,ದೋಚಲಾದ ಸೊತ್ತನ್ನ ಬೇರೆಯದೆ ಕಾರಲ್ಲಿ ತುಂಬಿ ದರೋಡೆಕೋರರು ಪೊಲೀಸರ ಧಿಕ್ಕು ತಪ್ಪಿಸಿರುವ ಸಾಧ್ಯತೆಗಳಿವೆ.

ಫಿಯೆಟ್ ಕಾರು ತಲಪಾಡಿ ಟೋಲ್ ಕ್ರಾಸ್ ಆಗಿದ್ದು ಉಪ್ಪಳ ಜಂಕ್ಷನ್ ದಾಟಿಲ್ಲ. ದರೋಡೆಕೋರರು ಬೆಂಗಳೂರಿನತ್ತ ಪಲಾಯನಗೈದಿರುವ ಶಂಕೆ ಇದೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ವಿಶೇಷ ತಂಡಗಳನ್ನು ರಚಿಸಿದ್ದು,ಆರೋಪಿಗಳ ಶೀಘ್ರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಶನಿವಾರದಂದು ಬ್ಯಾಂಕ್ ಶಾಖೆಯಲ್ಲಿ ದರೋಡೆಗೈದ ಸೊತ್ತುಗಳ ಮೌಲ್ಯ ಮಾಪನ ಪ್ರಕ್ರಿಯೆ ಆರಂಭವಾಗಿದೆ. ದರೋಡೆಗೈದ ಸೊತ್ತುಗಳ ನಿಖರ ಮೌಲ್ಯ ಮಾಪನ ನಡೆಯದೇ ಹಿರಿಯ ಪೊಲೀಸ್ ಅಧಿಕಾರಿಗಳು,ಸಹಕಾರಿ ಸಂಘದ ಧುರೀಣರು ಗೊಂದಲದ ವಿಭಿನ್ನ ಲೆಕ್ಕಾಚಾರದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಪೊಲೀಸರು ಶನಿವಾರದಂದು ಸ್ಥಳವನ್ನು ಮಹಜರು ನಡೆಸಿದ್ದಾರೆ.

ಬ್ಯಾಂಕ್ ಮುಂದೆ ಜಮಾಯಿಸಿದ ಗ್ರಾಹಕರು
ದರೋಡೆಯಿಂದ ಕಂಗೆಟ್ಟ ಬ್ಯಾಂಕ್ ಗ್ರಾಹಕರು ಶನಿವಾರ ಮುಂಜಾನೆಯೇ ಬ್ಯಾಂಕ್ ಮುಂದೆ ಜಮಾಯಿಸಿ ಸಹಕಾರಿ ಸಂಘದ ಧುರೀಣರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಗ್ರಾಹಕರು ತಮ್ಮ ಅಮೂಲ್ಯ ಒಡವೆಗಳಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದು, ಕಷ್ಟ ಕಾಲದ ನೆರವಿಗಾಗಿ ಅದನ್ನ ಅಡವಿಡುತ್ತಾರೆಯೇ ಹೊರತು ಒಡವೆಗಳನ್ನ ಕಳಕೊಳ್ಳಲು ಯಾರೂ ಇಷ್ಟ ಪಡಲ್ಲ. ಬ್ಯಾಂಕ್ ಆಡಳಿತದವರು ಗಾಬರಿಗೊಳ್ಳಬೇಡಿ ಅಂದಾಕ್ಷಣಕ್ಕೆ ಗ್ರಾಹಕರು ಸಮಾಧಾನರಾಗಲ್ಲ. ಕೋಟಿಗಟ್ಟಲೆ ಮೌಲ್ಯದ ಒಡವೆಗಳಿಗೆ ಕನಿಷ್ಟ ರಕ್ಷಣೆಯನ್ನೂ ನೀಡದೇ ಇರೋದರ ಬಗ್ಗೆ ಕೋಟೆಕಾರು ಸಹಕಾರಿ ಸಂಘದ ಆಡಳಿತದವರು ಕಿಂಚಿತ್ತು ವಿಷಾದವೇ ವ್ಯಕ್ತಪಡಿಸಿಲ್ಲ. ಬದಲಾಗಿ ಎಲ್ಲವೂ ಕಾಕತಾಳೀಯ ಎಂಬ ಬೇಜವಬ್ದಾರಿ ಹೇಳಿಯನ್ನಷ್ಟೆ ನೀಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!