ಹೊಸದಿಗಂತ ಪೊನ್ನಂಪೇಟೆ:
ಪೊನ್ನಂಪೇಟೆ ತಾಲೂಕು ದೇವನೂರು- ಸುಳುಗೋಡು ಗ್ರಾಮದಲ್ಲಿ ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಶನಿವಾರ ರಾತ್ರಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು ಗ್ರಾಮದ ರೈತ ಮುದ್ದಿಯಡ ದಿನು ಅವರಿಗೆ ಸೇರಿದ ಎರಡು ಹಸುಗಳನ್ನು ಹುಲಿ ಕೊಂದು ಭಾಗಶ ತಿಂದಿದೆ.
ಸ್ಥಳಕ್ಕೆ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಮತ್ತು ಶಾಸಕ ಎ. ಎಸ್. ಪೊನ್ನಣ್ಣ ಅವರೊಂದಿಗೆ ಮಾತನಾಡಿದ ಅವರು ಕೂಡಲೇ ಹುಲಿ ಸೆರೆ ಹಿಡಿಯಲು ಕಾರ್ಯಚರಣೆ ಕೈಗೊಳ್ಳುವಂತೆ ಹಾಗೂ ಗಬ್ಬದ ಹಸು ಆಗಿರುವುದರಿಂದ ವಿಶೇಷ ಪ್ರಕರಣದಲ್ಲಿ ಕೂಡಲೇ ಪರಿಹಾರವನ್ನು ನೀಡಬೇಕೆಂದು ನಿರ್ದೇಶನ ನೀಡಿದರು ಎಂದು ಸಂಕೇತ್ ಪೂವಯ್ಯ ಅವರು ತಿಳಿಸಿದರು.
ಇದಲ್ಲದೆ ಸಾಕಾನೆಗಳನ್ನು ಬಳಸಿ ಕಾಫಿ ಫಸಲಿಗೆ ನಷ್ಟವಾಗದಂತೆ ರಸ್ತೆಯ ಬದಿಯಲ್ಲಿ ಹುಲಿ ಸೆರೆಗೆ ಅರವಳಿಕೆ ನೀಡಿ ಕಾರ್ಯಚರಣೆ ಕೈಗೊಳ್ಳಲಾಗುವುದು. ಹಾಗೂ ಹುಲಿಯನ್ನು ಸಮೀಪದಲ್ಲಿ ಅರಣ್ಯ ಇರುವುದರಿಂದ ಅರಣ್ಯಕ್ಕೆ ಹುಲಿಯನ್ನು ಅಟ್ಟಲು ಕಾರ್ಯಚರಣೆಯನ್ನು ಸಹ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ, ತಿತಿಮತಿ ಆರ್. ಎಫ್. ಓ. ದೇವರಾಜ್ ಹಾಗು ಸಿಬ್ಬಂದಿಗಳು ಹಾಜರಿದ್ದರು.