ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅನಿಶ್ಚಿತತೆಗಳ ಆಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಸಕ್ತ ನಡೆಯುತ್ತಿರುವ ಅಂಡರ್-19 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ತಂಡವು ಮೊದಲ ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದಿದ್ದರೂ, ದ್ವಿತೀಯ ಸುತ್ತಿಗೆ (ಸೂಪರ್-6) ಪ್ರವೇಶಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
ಗ್ರೂಪ್-ಬಿ ನಲ್ಲಿ ಸ್ಥಾನ ಪಡೆದಿದ್ದ ನ್ಯೂಝಿಲೆಂಡ್ ಆಡಿದ ಮೂರು ಪಂದ್ಯಗಳ ಪೈಕಿ:
ಮೊದಲೆರಡು ಪಂದ್ಯಗಳು: ಮಳೆಯಿಂದಾಗಿ ರದ್ದಾದವು (ತಲಾ 1 ಅಂಕ ಲಭ್ಯ).
ಮೂರನೇ ಪಂದ್ಯ: ಭಾರತದ ವಿರುದ್ಧ 7 ವಿಕೆಟ್‌ಗಳ ಸೋಲು.
ಒಟ್ಟಾರೆಯಾಗಿ ಕಿವೀಸ್ ಪಡೆ ಗಳಿಸಿದ್ದು ಕೇವಲ 2 ಅಂಕಗಳು. ಆದರೆ ಅದೇ ಗುಂಪಿನಲ್ಲಿದ್ದ ಯುಎಸ್ಎ ತಂಡವು ಆಡಿದ ಮೂರೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಕೇವಲ 1 ಅಂಕವನ್ನಷ್ಟೇ ಪಡೆಯಲು ಶಕ್ತವಾಯಿತು. ಇದರಿಂದಾಗಿ ನ್ಯೂಝಿಲೆಂಡ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಅಧಿಕೃತವಾಗಿ ಸೂಪರ್-6 ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಈಗ ಸೂಪರ್-6 ಹಂತದ ಗ್ರೂಪ್-2 ಗೆ ಸೇರಿರುವ ನ್ಯೂಝಿಲೆಂಡ್, ಬಲಿಷ್ಠ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳನ್ನು ಎದುರಿಸಬೇಕಿದೆ. ಒಂದು ವೇಳೆ ಕಿವೀಸ್ ಈ ಎರಡೂ ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್-2 ಸ್ಥಾನಕ್ಕೇರಿದರೆ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ.
ಒಂದು ವೇಳೆ ನ್ಯೂಝಿಲೆಂಡ್ ತನ್ನ ಮುಂದಿನ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಅಥವಾ ಫೈನಲ್ ತಲುಪಿದರೆ, ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಒಂದೂ ಜಯ ದಾಖಲಿಸದೆ ನಾಕೌಟ್ ಹಂತಕ್ಕೇರಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮಳೆಯ ನೆರವಿನಿಂದ ದ್ವಿತೀಯ ಸುತ್ತು ತಲುಪಿರುವ ನ್ಯೂಝಿಲೆಂಡ್, ಈಗ ತನ್ನ ಸಾಮರ್ಥ್ಯದ ಮೇಲೆ ಮುಂದಿನ ಹಂತ ತಲುಪುತ್ತಾ ಎಂಬುದನ್ನು ಕಾದು ನೋಡಬೇಕಿದೆ.



