Sunday, January 25, 2026
Sunday, January 25, 2026
spot_img

ಖಜಾನೆ ತುಂಬಿಸಲು ಕುಡುಕರ ರಾಜ್ಯ ಮಾಡ್ತಿದ್ದೀರಾ? ಸಿದ್ದರಾಮಯ್ಯ ಸರ್ಕಾರಕ್ಕೆ ಬಿವೈವಿ ಪ್ರಶ್ನೆ

ಹೊಸದಿಗಂತ ಹುಬ್ಬಳ್ಳಿ:

“ರಾಜ್ಯ ಸರ್ಕಾರವು ತನ್ನ ಖಜಾನೆ ತುಂಬಿಸಿಕೊಳ್ಳಲು ಅಬಕಾರಿ ಇಲಾಖೆಯ ಮೇಲೆ ಒತ್ತಡ ಹೇರುತ್ತಿದ್ದು, ಇಡೀ ಕರ್ನಾಟಕವನ್ನು ಮದ್ಯಪಾನಿಗಳ ರಾಜ್ಯವನ್ನಾಗಿ ಮಾಡಲು ಹೊರಟಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಭಾನುವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.

ಪ್ರತಿ 500 ಮೀಟರ್‌ಗೆ ಔಷಧಿ ಅಂಗಡಿ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಮದ್ಯದ ಅಂಗಡಿಗಳು ಮಾತ್ರ ಸುಲಭವಾಗಿ ಲಭ್ಯವಿವೆ. ದಿನಸಿ ಅಂಗಡಿಗಳಲ್ಲೂ ಮದ್ಯ ಸಿಗುವಂತಾಗಿದ್ದು, ಇಡೀ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದೇ ಈ ಎಲ್ಲಾ ಅನಾಹುತಗಳಿಗೆ ಮೂಲ ಕಾರಣ ಎಂದು ಅವರು ದೂರಿದರು.

ಸಿದ್ದರಾಮಯ್ಯ ಅವರು ಅನುಭವಿ ಸಿಎಂ ಎಂದು ಹೇಳಿಕೊಳ್ಳುತ್ತಾರೆ, ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಹೊಸ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ನಡೆದ ಮನೆ ಹಂಚಿಕೆ ಸಮಾರಂಭದ ಕುರಿತು ಮಾತನಾಡಿದ ಅವರು, “ಈ ಮನೆಗಳ ಯೋಜನೆಗೆ ಅಡಿಪಾಯ ಹಾಕಿದ್ದು ಬಿಜೆಪಿ ಸರ್ಕಾರ. ಮಹಾನಗರ ಪಾಲಿಕೆ 16 ಎಕರೆ ಜಾಗ ನೀಡಿದೆ ಮತ್ತು ಕೇಂದ್ರ ಸರ್ಕಾರ ಪ್ರತಿ ಮನೆಗೆ 1.50 ಲಕ್ಷ ರೂ. ಅನುದಾನ ನೀಡಿದೆ. ಆದರೆ ಇಂದು ಸಿಎಂ ಸಿದ್ದರಾಮಯ್ಯ ಅವರು ತಾವೇ ಎಲ್ಲವನ್ನೂ ಮಾಡಿದಂತೆ ಪ್ರಚಾರ ಪಡೆಯುತ್ತಿದ್ದಾರೆ” ಎಂದು ಟೀಕಿಸಿದರು.

ಸಮಾರಂಭದಲ್ಲಿ ಶಿಷ್ಟಾಚಾರ ಪಾಲಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಯೋಜನೆಗೆ ಸಹಕಾರ ನೀಡಿದ ಕೇಂದ್ರ ಸಚಿವರನ್ನು ಆಹ್ವಾನಿಸದಿರುವುದು ಸರಿಯಲ್ಲ. ಅಲ್ಲದೆ, ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಮದ್ಯದ ಮಾರಾಟ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂಬ ಗಂಭೀರ ಆರೋಪವನ್ನು ವಿಜಯೇಂದ್ರ ಮಾಡಿದರು.

Must Read