ಹೊಸದಿಗಂತ ಡಿಜಿಟಲ್ ಡೆಸ್ಕ್:
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶಿವೈಕ್ಯ ಡಾ.ಶಿವಕುಮಾರ ಶ್ರೀಗಳು ಇಂದಿಗೆ ನಮ್ಮೆನ್ನೆಲ್ಲ ಅಗಲಿ 6 ವರ್ಷಗಳೇ ಕಳೆದಿವೆ. ಇದರ ಸ್ಮರಣಾರ್ಥವಾಗಿ ಇಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಗ್ಗೆಯಿಂದಲೇ ಸಿದ್ಧಮಠದ ಆವರಣದಲ್ಲಿರುವ ಶಿವೈಕ್ಯ ಡಾ.ಶಿವಕುಮಾರ ಶ್ರೀಗಳ ಗದ್ದುಗೆಗೆ ಮಂತ್ರಘೋಷ್ಯಗಳೊಂದಿಗೆ ವಿಶೇಷ ಪೂಜೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಮಠದ ಆವರಣದಲ್ಲಿ ಶ್ರೀಗಳ ಪುತ್ಥಳಿಯನ್ನ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ಶ್ರೀಮಠದ ಆವರಣದಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮೇಘಾಲಯ ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ವೇದಿಕೆಯಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಹಾಗೂ ಉತ್ತಾಧಿಕಾರಿ ಶ್ರೀ ಶಿವ ಸಿದ್ಧೇಶ್ವರ ಸ್ವಾಮೀಜಿ, ಮೈಸೂರಿನ ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರಿಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಮೈಸೂರಿನ ಸಾಹಿತಿ ಡಾ ಹೆಚ್.ಟಿ.ಶೈಲಜಾ ಹಾಗೂ ತುಮಕೂರಿನ ಸಮಾಜ ಸೇವಕ ಜಿ.ಎನ್.ಬಸವರಾಜಪ್ಪ ಅವರಿಗೆ ಸಿದ್ಧಗಂಗಾ ಶಿವಕುಮಾರ ಶ್ರೀ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುವುದು. ಅಲ್ಲದೇ ಸಂಜೆ 6 ಗಂಟೆಗೆ ಇದೇ ವೇದಿಕೆಯಲ್ಲಿ ವಿವಿಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.