ಹೊಸದಿಗಂತ ಗೋಕರ್ಣ:
ಇಲ್ಲಿನ ಮುಖ್ಯ ಕಡಲತೀರದಲ್ಲಿ ರವಿವಾರ ಮುಂಜಾನೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಜೀವರಕ್ಷಕ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ತಪ್ಪಿದೆ. ಸಮುದ್ರದ ಸುಳಿಗೆ ಸಿಲುಕಿ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನನ್ನು ಸಿಬ್ಬಂದಿಗಳು ಸಾಹಸಮಯವಾಗಿ ರಕ್ಷಿಸಿದ್ದಾರೆ.
ಮೈಸೂರು ಮೂಲದ ಮಧು (23) ಎಂಬ ಯುವಕ ತನ್ನ 10 ಜನ ಸ್ನೇಹಿತರ ತಂಡದೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ರವಿವಾರ ಮುಂಜಾನೆ ಎಲ್ಲರೂ ಸಮುದ್ರದಲ್ಲಿ ಈಜಲು ಇಳಿದಾಗ, ಮಧು ಅನಿರೀಕ್ಷಿತವಾಗಿ ನೀರಿನ ಸುಳಿಗೆ ಸಿಲುಕಿ ದಡ ಸೇರಲಾರದೆ ಒದ್ದಾಡುತ್ತಿದ್ದರು.
ಯುವಕ ಆಪತ್ತಿನಲ್ಲಿರುವುದನ್ನು ಗಮನಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಜೀವರಕ್ಷಕ ಸಿಬ್ಬಂದಿಗಳಾದ ಮೋಹನ ಅಂಬಿಗ, ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ ಮತ್ತು ರೋಷನ್ ಖಾರ್ವಿ ನೀರಿಗಿಳಿದು ರಕ್ಷಣೆಗೆ ಧಾವಿಸಿದರು. ಇವರಿಗೆ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಹಾಗೂ ಜೆಟ್‌ಸ್ಕಿ ಚಾಲಕರು ಸಾಥ್ ನೀಡಿದರು. ಎಲ್ಲರ ಸಂಘಟಿತ ಪ್ರಯತ್ನದಿಂದಾಗಿ ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು.
ಬೀಚ್ ಸೂಪರ್‌ವೈಸರ್ ರವಿ ನಾಯ್ಕ್ ಮತ್ತು ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಮಾರ್ಗದರ್ಶನದಲ್ಲಿ, ಜೆಟ್‌ಸ್ಕಿ ಚಾಲಕರಾದ ದರ್ಶನ್ ಲಕ್ಕುಮನೆ, ಜಗ್ಗು ಹೊಸಕಟ್ಟ ಹಾಗೂ ಸಿಬ್ಬಂದಿಗಳಾದ ದೀಪಕ್ ಗೌಡ, ಅಶೋಕ್ ಹೊಸಕಟ್ಟ, ಕಮಲಾಕರ್ ಹೊಸ್ಕಟ್ಟ, ಮಹೇಶ್ ಹೊಸ್ಕಟ್ಟ ಮತ್ತು ಸಚಿನ್ ಹೊಸಕಟ್ಟ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.



