ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಬೆಳ್ಳಂಬೆಳಗ್ಗೆ ರಾಜ್ಯದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಒಂಬತ್ತು ಮಂದಿ ಮೃತಪಟ್ಟಿದ್ದರು. ಹಾವೇರಿ ಜಿಲ್ಲೆಯ ಸವಣೂರಿನಿಂದ ಹಣ್ಣು ಮತ್ತು ತರಕಾರಿಗಳನ್ನು ಲಾರಿಯಲ್ಲಿ ಹೇರಿಕೊಂಡು ವ್ಯಾಪಾರಸ್ಥರು ಕುಮಟಾದಲ್ಲಿ ಬುಧವಾರದ ಸಂತೆಗೆ ಹೊರಟಿದ್ದರು. ಮಂಗಳವಾರ ರಾತ್ರಿ ಸುಮಾರು 10.30ರ ವೇಳೆಗೆ ಸವಣೂರಿನಿಂದ ಹೊರಟಿದ್ದು, ಲಾರಿಯಲ್ಲಿ ಚಾಲಕ ಸೇರಿ ಒಟ್ಟು 29 ಮಂದಿ ಜನರಿದ್ದರು.
ಯಲ್ಲಾಪುರ ಸಮೀಪದ ಗುಳ್ಳಾಪುರ ಪೆಟ್ರೋಲ್ ಬಂಕ್ ಬಳಿ ಬುಧವಾರ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಹೆದ್ದಾರಿ ಪಕ್ಕದ 5 ಅಡಿ ಕಂದಕಕ್ಕೆ ಉರುಳಿ ಬುಡಮೇಲಾಗಿ ಬಿದ್ದಿದೆ. ಈ ವೇಳೆ 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಸಮಯದಲ್ಲಿ ನಾನು ಮಲಗಿದ್ದೆ. ಜೋರಾದ ಶಬ್ಧ ನಾನು ಎಚ್ಚರಗೊಳ್ಳುವಂತ ಮಾಡಿತ್ತು. ಚಾಲಕನ ಪಕ್ಕದಲ್ಲಿಯೇ ನಾನು ಕುಳಿತಿದ್ದೆ. ಬಳಿಕ ಕಿಟಕಿ ಗಾಜು ಹೊಡೆದು ಹೊರ ಬಂದೆ ಎಂದು ಅಪಘಾತದಲ್ಲಿ ಗಾಯಗೊಂಡ 19 ಜನರಲ್ಲಿ ಒಬ್ಬರಾದ ಖಾದ್ರಿ ಹೇಳಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಮೊಬೈಲ್ ನೆಟ್ ವರ್ಕ್ ಇರಲಿಲ್ಲ. ರಸ್ತೆಯಲ್ಲಿ ಚಲಿಸುತ್ತದ್ದ ಇತರೆ ವಾಹನ ಸವಾರರ ಸಹಾಯ ಕೇಳಿದ್ದೆವು. ಬಳಿಕ ಬೆಳಿಗ್ಗೆ 5 ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಬಂದು, ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ತಿಳಿಸಿದ್ದಾರೆ. ತರಕಾರಿ ಲಾರಿ ಉಲ್ಟಾ ಬಿದ್ದಿದ್ದರಿಂದ ತರಕಾರಿಗಳು ಜನರ ಮೇಲೆ ಬಿದ್ದಿದ್ದವು. ಎಷ್ಟೋ ಮಂದಿ ಉಸಿರಾಡಲು ಆಗದೇ ಮೃತಪಟ್ಟಿದ್ದಾರೆ ಎಂದು ಅಪಘಾತದಿಂದ ಬದುಕಿಳಿದು ಬಂದವರು ಹೇಳಿದ್ದಾರೆ.