ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೆಚ್ಚುತ್ತಿರುವ ಗೋವುಗಳ ಮೇಲಿನ ಹಿಂಸಾತ್ಮಕ ಕೃತ್ಯಗಳು ಆಸ್ತಿಕರನ್ನು ಕೆರಳಿಸಿದೆ.
ಗೋವುಗಳ ಸಂರಕ್ಷಣೆ, ಸುರಕ್ಷೆ ಹಿನ್ನೆಲೆಯಲ್ಲಿ ಇಂದಿನಿಂದ ಜ.29ರವರೆಗೆ ಕೋಟಿ ವಿಷ್ಣುಸಹಸ್ರನಾಮ ಪಠಣ, ಶಿವ ಪಂಚಾಕ್ಷರಿ ಜಪ ಅಭಿಯಾನ ಆರಂಭವಾಗಿದ್ದು, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಇಂದು ಪೇಜಾವರ ಶ್ರೀಗಳು ಚಾಲನೆ ನೀಡಿದ್ದಾರೆ.
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಈ ಕರೆಗೆ ನಾಡಿನ ವಿವಿಧ ಮಠಾಧೀಶರು ಪೂರ್ಣ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠವೂ ಅಭಿಯಾನದಲ್ಲಿ ಪೂರ್ಣವಾಗಿ ತೊಡಗಿಕೊಂಡಿದ್ದು, ಮಂತ್ರ ಪಠಣ ಆರಂಭವಾಗಿದೆ.
ಪ್ರತಿ ಮನೆಯಲ್ಲಿ ಒಂದು ವಾರ ಎಲ್ಲರೂ ಒಟ್ಟಾಗಿ ದೇವರ ಮುಂದೆ ದೀಪ ಬೆಳಗಬೇಕು, ಗೋವುಗಳ ಮೇಲಿನ ಹಿಂಸಾಚಾರ, ಹತ್ಯೆಯಂಥ ಕೃತ್ಯಗಳು ಅಂತ್ಯವಾಗಲಿ ಎಂದು ದೇವರಲ್ಲಿ ಪ್ರಾಥಿಸಬೇಕು ಎಂದು ಶ್ರೀಗಳು ಹೇಳಿದ್ದಾರೆ.
ಇಂದಿನಿಂದ ಆರು ದಿನಗಳ ಕಾಲ ಕೋಟಿ ವಿಷ್ಣುಸಹಸ್ರನಾಮಪಠನ ನಡೆಯಲಿದೆ. ಜ.25ರಂದು ಒಂದು ದಿನದ ಉಪವಾಸವೂ ನಡೆಯಲಿದೆ.
ಉಡುಪಿಯ ಪರ್ಯಾಯ ಪುತ್ತಿಗೆ ಮಠ ಸಹಿತ ಅಷ್ಟ ಮಠಗಳು, ಮಂತ್ರಾಲಯ ರಾಯರ ಮಠ, ಉತ್ತರಾದಿಮಠ, ಸುಬ್ರಹ್ಮಣ್ಯ ಮಠ, ಶ್ರೀರಾಮಚಂದ್ರಾಪುರ ಮಠ, ಆದಿಚುಂಚನಗಿರಿ ಮಠ, ಮಾಣಿಲ ಮಠ, ಗುರುಪುರ ಮಠ, ಆರ್ಯ ಈಡಿಗ ಶ್ರೀ ಸಂಸ್ಥಾನ, ವ್ಯಾಸರಾಜ ಮಠ, ಶ್ರೀಪಾದರಾಜಮಠ, ಕಣ್ವಮಠ, ಕೂಡ್ಲಿ ಶಂಕರ ಮಠ ಇನ್ನಿತರ ಮಠಗಳು ಸಂಪೂರ್ಣ ಬೆಂಬಲ ಸೂಚಿಸಿವೆ.