ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಮದಿಂದ ಆವೃತವಾದ ಹಿಮಾಲಯದ ಪರ್ವತ ಶ್ರೇಣಿಗಳ ನಡುವೆ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲೊಂದು ಪ್ರಯಾಣ ಮಾಡುತ್ತಿರುವ ದೃಶ್ಯ ಕಣ್ಮನ ಸೆಳೆಯುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ದಟ್ಟವಾದ ಹಿಮದಿಂದ ಆವೃತವಾದ ಭೂದೃಶ್ಯದ ಮಧ್ಯೆ ವಂದೇ ಭಾರತ್ ಹಾದು ಹೋಗುತ್ತಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಬನಿಹಾಲ್ ಭಾಗದ ಈ ದೃಶ್ಯವು ಭಾರತೀಯ ರೈಲ್ವೆಯ ತಾಂತ್ರಿಕ ಶಕ್ತಿಯನ್ನು ಇಡೀ ಜಗತ್ತಿಗೆ ಸಾರುತ್ತಿದೆ. ಹಿಮದಿಂದ ಆವೃತವಾದ ಹಳಿಗಳು, ಹೆಪ್ಪುಗಟ್ಟಿದ ಇಳಿಜಾರುಗಳು ಮತ್ತು ಎತ್ತರದ ಶಿಖರಗಳು ಕಣ್ಣು ಹಾಯಿಸಿ ದಷ್ಟು ಮನಸ್ಸಿಗೆ ಹಿತ ನೀಡುತ್ತಿವೆ. ಒಂದು ಕಾಲದಲ್ಲಿ ಗರಿಷ್ಠ ಚಳಿಗಾಲದಲ್ಲಿ ಸಂಪರ್ಕವನ್ನು ಸ್ಥಗಿತಗೊಳಿಸಿದ ರೈಲು ಸೇವೆಗಳು ಈಗ ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಈ ದೃಶ್ಯ ಪ್ರತಿ ಬಿಂಬಿಸಿದೆ.
ಸಾಮಾನ್ಯವಾಗಿ ಅತಿಯಾದ ಹಿಮಪಾತ ಇದ್ದಾಗ ಕಾಶ್ಮೀರದಲ್ಲಿ ರಸ್ತೆ ಸಂಚಾರ ಸ್ಥಗಿತ ಆಗುತ್ತದೆ. ಆದರೆ, ಈ ವಂದೇ ಭಾರತ್ ರೈಲನ್ನು ವಿಶೇಷವಾಗಿ ರಚನೆ ಮಾಡಲಾಗಿದೆ. ಈ ವಿಡಿಯೋದಲ್ಲಿ, ಸುತ್ತಲೂ ಹಿಮದ ಹೊದಿಕೆ, ಅದರ ನಡುವೆ ಹಳಿಗಳ ಮೇಲೆ ಅತಿ ವೇಗದ ವಂದೇ ಭಾರತ್ ರೈಲು ಸಾಗುತ್ತಿರುವ ದೃಶ್ಯ ನೀವು ಗಮನಿಸಬಹುದು.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, “ಭಾರತದಲ್ಲಿಯೇ ಇಂತಹ ಹಿಮದಿಂದ ಆವೃತವಾದ ರೈಲು ಪ್ರಯಾಣವನ್ನು ಆನಂದಿಸಬಹುದಾದಾಗ ಸ್ವಿಟ್ಜರ್‌ಲ್ಯಾಂಡ್‌ಗೆ ಭೇಟಿ ನೀಡಲು ಲಕ್ಷಗಟ್ಟಲೆ ಖರ್ಚು ಮಾಡುವುದು ಏಕೆ?” ಎಂದು ಪ್ರಶ್ನೆ ಮಾಡಿದ್ದಾರೆ.



