ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸುನೀಲ್ ಅವರು ಪತ್ತೆಯಾಗಿದ್ದು, ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಅಪಹರಣಕಾರರೇ ಬಸ್ ಚಾರ್ಜ್ಗೆ ಅಂತ ವೈದ್ಯನಿಗೆ 300 ರೂ. ಕೊಟ್ಟು ವಾಪಸ್ ಮನೆಗೆ ಕಳುಹಿಸಿದ್ದಾರೆ.
ಸುನೀಲ್ ಅವರು ಬೆಳಿಗ್ಗೆ ವಾಕಿಂಗ್ ತೆರಳಿದ್ದ ವೇಳೆ ಇಂಡಿಕಾ ಕಾರಿನಲ್ಲಿ ಬಂದ ಅಪರಿಚಿತರು ಅಪಹರಣ ಮಾಡಿದ್ದರು. ಬಳಿಕ ಬಿಡುಗಡೆಗೆ 6 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಬೆನ್ನಲ್ಲೇ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿ, ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿದ್ದರು,ಉದ್ಯಾನವನದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳಲ್ಲಿ ನಾಲ್ಕು ವೈದ್ಯರನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು.
ಈ ನಡುವೆ ಅಹರಣಕಾರರು ಸುನೀಲ್ ಅವರನ್ನು ಕುರುಗೋಡು ತಾಲೂಕಿನ ಸೋಮ ಸಮುದ್ರ ಗ್ರಾಮದ ಹೊಲ ವೊಂದರಲ್ಲಿ ಬಿಟ್ಟು ಹೋಗಿದ್ದು, ಹುಡುಕಾಟದಲ್ಲಿ ತೊಡಗಿದ್ದ ಪೊಲೀಸರು ಪತ್ತೆ ಮಾಡಿ, ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಪೊಲೀಸರು ಅಲರ್ಟ್ ಆಗಿದ್ದಾರೆ ಎನ್ನುವ ಮಾಹಿತಿ ಆರೋಪಿಗಳಿಗೆ ಗೊತ್ತಾದ ಕೂಡಲೇ ಸಿರಗುಪ್ಪ ತಾಲೂಕಿನ ಸೋಮಸಮುದ್ರದ ಜಮೀನೊಂದರಲ್ಲಿ ಬಿಟ್ಟು ಹೋಗಿದ್ದಾರೆ. ಆದರೆ ಸಂಜೆಯವರೆಗೆ ಕಾದು ನೋಡಿದರೂ ನಮಗೆ ಇನ್ನೇನೂ ಸಿಗುವುದಿಲ್ಲ ಎಂದು ತಿಳಿದು ಆತನ ಕೈಗೆ 300 ರೂ. ಕೊಟ್ಟು ಸುರಕ್ಷಿತವಾಗಿ ಮನೆಗೆ ಹೋಗು ಎಂದು ಹೇಳಿದ್ದಾರೆ.
ಈ ಕುರಿತು ವೈದ್ಯ ಸುನೀಲ್ ಮಾತನಾಡಿ, ಅಪಹರಣದ ವೇಳೆ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿದ್ದರು. ಅಲ್ಲದೇ ಕಿಡ್ನ್ಯಾಪ್ ಮಾಡುವಾಗಲೇ ಹಲ್ಲೆ ಮಾಡಿದ್ದರಿಂದ ಗಾಬರಿಗೊಂಡಿದ್ದೆ. ಆದರೆ ಅವರ ಕುಟುಂಬಸ್ಥರಿಂದ ಯಾವುದೇ ರೆಸ್ಪಾನ್ಸ್ ಬರದಿದ್ದಾಗ ಸ್ವತಃ ಕಿಡ್ನ್ಯಾಪರ್ಸ್ ಭೀತಿಗೆ ಒಳಗಾಗಿದ್ದರು. ಜೊತೆಗೆ ಪೊಲೀಸರಿಗೆ ಮಾಹಿತಿ ತಿಳಿದಿದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಬಿಟ್ಟು ಬೇರೆಡೆ ಹೋಗಲು ಸಾಧ್ಯವಾಗದೇ ಕೊನೆಗೆ ಜಮೀನೊಂದರಲ್ಲಿ ಬಿಟ್ಟು ಹೋಗಿದ್ದಾರೆ ಎಂದರು.
ಇದೀಗ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ. ಅಪಹರಣ ಮಾಡಿದವರು ಯಾರು ಎಂಬ ಬಗ್ಗೆ ಇದುವರೆಗೂ ಸುಳಿವು ಸಿಕ್ಕಿಲ್ಲ.