Sunday, January 25, 2026
Sunday, January 25, 2026
spot_img

ಕುಮಾರಸ್ವಾಮಿ ಜತೆ ಚರ್ಚೆಗೆ ನಾನು ಸಿದ್ಧ: ಕೇಂದ್ರ ಸಚಿವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿ ಸವಾಲು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಡಿ.ಕೆ. ಸಹೋದರರು ನನ್ನ ಜೊತೆ ಚರ್ಚೆ ಬರಲಿ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಸವಾಲು ಹಾಕಿದ್ದು, ಕುಮಾರಸ್ವಾಮಿ ಜತೆ ಚರ್ಚೆಗೆ ಸಿದ್ಧನಿದ್ದೇನೆ. ಈ ವಿಚಾರವನ್ನು ಎಲ್ಲಾ ಮಾಧ್ಯಮಗಳು ಕುಮಾರಸ್ವಾಮಿ ಅವರಿಗೆ ತಿಳಿಸಿ. ಅವರು ಮುಖ್ಯಮಂತ್ರಿಯಾಗಿದ್ದಾಲೇ ಅವರ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ಈಗಲೂ ಸಹ ಬಹಳ ನಮ್ರತೆಯಿಂದ ಅವರ ಸವಾಲು ಸ್ವೀಕಾರ ಮಾಡುತ್ತೇನೆ, ಚರ್ಚೆಗೆ ಬರಲಿ ಎಂದು ಪ್ರತಿಸವಾಲು ಹಾಕಿದರು.

ಕನಕಪುರದ ದೊಡ್ಡ ಆಲಹಳ್ಳಿಯಲ್ಲಿ ನಿರ್ಮಾಣವಾಗಿರುವ ನೂತನ ರಾಮ ಮಂದಿರದ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ಅವರು ಯಾವತ್ತು ಚರ್ಚೆಗೆ ಸಿದ್ಧ ಎಂದು ಹೇಳುವರೋ ಅಂದು ಚರ್ಚೆ ಮಾಡಲು ನಾನು ತಯಾರಿದ್ದೇನೆ. ಮಾಧ್ಯಮಗಳೇ ದಿನಾಂಕ ನಿಗದಿ ಮಾಡಲಿ. ರಾಮಮಂದಿರದ ಮುಂದೆ ಪ್ರಶ್ನೆ ಕೇಳಿದ್ದೀರಿ. ನಾನು ಇದೇ ರಾಮ ಮಂದಿರದಲ್ಲಿ ಕುಳಿತು, ನುಡಿದಂತೆ ನಡೆಯುತ್ತೇನೆ. ಪೂರ್ವನಿಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಈ ಚರ್ಚೆಯ ದಿನಾಂಕದ ಬಗ್ಗೆ ಮೂರು ದಿನ ಮುಂಚಿತವಾಗಿ ತಿಳಿಸಿ, ನಾನು ಚರ್ಚೆಗೆ ಬರುತ್ತೇನೆ ಎಂದರು.

ಬಿಡದಿ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿರುವ ಬಗ್ಗೆ ಕೇಳಿದಾಗ, ಅವರು ರಾಜಕಾರಣ ಮಾಡಬೇಕು ಮಾಡುತ್ತಿದ್ದಾರೆ. ಯೋಜನೆಯನ್ನು ನಾನು ಮಾಡಿದ್ದಲ್ಲ, ಅವರೇ ಮಾಡಿದ್ದು. ರೈತರಿಗೆ 800 ಅಡಿ ಭೂಮಿಯನ್ನು ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ ಎಂದು ಅವರೇ ಹೇಳಿದ್ದಾರೆ. ಅವರು ಹೇಳಿದ್ದನ್ನು ನಾವು ಈಗ ಮುಂದುವರೆಸುತ್ತಿದ್ದೇವೆ ಅಷ್ಟೇ ಎಂದರು‌.

ಇಲ್ಲಿ ನಾನು ಹಾಗೂ ಕುಮಾರಸ್ವಾಮಿ ಇಬ್ಬರೂ ಶಾಶ್ವತವಲ್ಲ. ಆದರೆ ನಾವು ತೆಗೆದುಕೊಂಡ ತೀರ್ಮಾನ ಶಾಶ್ವತವಾಗಿ ಉಳಿಯುತ್ತದೆ. ನಾನು ಹಾಗೂ ಅವರು ಇಲ್ಲದೇ ಹೋದರೂ ಯೋಜನೆಯಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಮುಂದಿನ ಜನಾಂಗ ನಮ್ಮನ್ನು ನೆನಪಿಸಿಕೊಳ್ಳಲಿದೆ. ನನ್ನ‌ ಕ್ಷೇತ್ರದ ರಸ್ತೆಗಳ ಅಗಲೀಕರಣ ಮಾಡಲಾಗಿದೆ. ಇದಕ್ಕೆ ಎಷ್ಟು ಪರಿಹಾರ ದೊರಕಿದೆ ಎಂದು ದೊಡ್ಡಆಲಹಳ್ಳಿ, ಸಾತನೂರು, ಕನಕಪುರದವರನ್ನು ಕೇಳಿ. ದೊಡ್ಡ ಆಲಹಳ್ಳಿಯಲ್ಲಿ ಅಡಿಗೆ 1,500 ರೂಪಾಯಿ ಪರಿಹಾರ ಕೊಡಿಸಿದ್ದೇನೆ. ನಗರ ಭಾಗದ ಸೌಲಭ್ಯಗಳನ್ನು ಇಲ್ಲಿ ಮಾಡಿಕೊಡಲಾಗಿದೆ. ನಾನು ಮಾಧ್ಯಮಗಳಿಗೆ ಉತ್ತರಿಸುವ ಬದಲು ನೇರವಾಗಿ ಕುಮಾರಸ್ವಾಮಿ ಅವರಿಗೇ ಉತ್ತರ ನೀಡುತ್ತೇನೆ ಎಂದರು.

ಅಂತಿಮ ದಿನಗಳನ್ನು ರಾಮನಗರ ಜಿಲ್ಲೆಯಲ್ಲಿಯೇ ನಾನು ಮುಂದುವರೆಸುತ್ತೇನೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ, “ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ. ಅವರಿಗೆ ಶಕ್ತಿ ಕೊಡಲಿ, ಅವರ ಆಸೆ ಏನಿದೆಯೋ ಅದನ್ನು ಕೇಳಿಕೊಳ್ಳಲಿ. ಜನವುಂಟು, ಅವರುಂಟು. ಅದೇ ರೀತಿ ಜನವುಂಟು ನಾವುಂಟು” ಎಂದರು.

Must Read

Skip to toolbar