ದೊಡ್ಮನೆಯ ನೂರು ದಿನಗಳ ಆಟ ಮುಗಿದಿದ್ದು ಬಿಗ್ಬಾಸ್ ಮನೆಯ ವಿನ್ನರ್ ಆಗಿ ಹನುಮಂತು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಬಿಗ್ಬಾಸ್ ನಡೆಯುವಾಗ ಹೆಚ್ಚೇನು ಸದ್ದು ಮಾಡದೇ ತನ್ನ ಪಾಡಿಗೆ ತಾನು ಆಟ ಆಡಿಕೊಂಡು ಹೋಗ್ತಿದ್ದ ಹನುಮಂತು ವಿನ್ನರ್ ಆಗಿದ್ದು ಹೇಗೆ ಅನ್ನೋ ಪ್ರಶ್ನೆ ಎಷ್ಟೋ ಮಂದಿಗೆ ಕಾಡುತ್ತಾ ಇದೆ.
ಹನುಮಂತು ನೋಡಿ ಸಿಂಪತಿಯಿಂದ ಟ್ರೋಫಿ ಕೊಟ್ಟಿದ್ದಾರೆ, ಮುಂದೆ ಚಾನೆಲ್ಗೆ ಉಪಯೋಗಕ್ಕೆ ಬರುತ್ತಾರೆ ಎಂದು ಅವರನ್ನೇ ಗೆಲ್ಲಿಸಿದ್ದಾರೆ, ಇವರಿಗಿಂತ ಉಳಿದವರಿಗೆ ಅರ್ಹತೆ ಇತ್ತು ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿವೆ. ಆದರೆ ಹನುಮಂತು ವಿನ್ ಆಗಿದ್ದು ಯಾಕೆ?
ಸಾಮಾನ್ಯವಾಗಿ ಬಿಗ್ಬಾಸ್ ಮನೆಯಲ್ಲಿ ಉಳಿಯಬೇಕು ಅಂದ್ರೆ ಏನೇನೋ ಮಾಡಬೇಕು ಎಂದು ಸ್ಪರ್ಧಿಗಳು ಆಲೋಚಿಸಿಕೊಂಡು ಬಂದಿರುತ್ತಾರೆ. ಎಷ್ಟೋ ಸ್ಪರ್ಧಿಗಳು ಸ್ಟ್ರಾಂಗ್ ಎನಿಸಿದವರ ಬಾಲ ಹಿಡಿದುಕೊಳ್ಳೋದು, ಹುಡುಗಿಯರ ಹಿಂದೆ ಸುತ್ತಿ ಫೂಟೇಜ್ ತೆಗೆದುಕೊಳ್ಳೋದು, ಟೆಂಪರರಿ ಗರ್ಲ್ಫ್ರೆಂಡ್ ಅಥವಾ ಬಾಯ್ಫ್ರೆಂಡ್ ಮಾಡಿಕೊಳ್ಳೋದು ಮಾಡ್ತಾರೆ. ಇದ್ಯಾವುದೂ ವರ್ಕೌಟ್ ಆಗದವರು ಕೆಟ್ಟಪದಗಳ ಮೊರೆ ಹೋಗ್ತಾರೆ, ರಂಪ ರಾದ್ಧಾಂತ ಮಾಡಿ ಕ್ಯಾಮೆರಾ ಫೋಕಸ್ ಕದಿಯುತ್ತಾರೆ.
ಒಬ್ಬಂಟಿಯಾಗಿ ಆಡೋಕೆ ಭಯವಾಗಿ ಟೀಂ ಮಾಡ್ಕೋತಾರೆ, ಇದೆಲ್ಲಕ್ಕಿಂತ ಕಾಮನ್ ಅಂದರೆ ಮನೆಯ ಹೊರಗೆ ಚೆನ್ನಾಗಿ ದುಡ್ಡು ಖರ್ಚು ಮಾಡಿ ಪ್ರಮೋಷನ್ಸ್ ಮಾಡಿಕೊಳ್ತಾರೆ, ಸಾಲದಕ್ಕೆ ಪ್ರತಿಸ್ಪರ್ಧಿಗಳ ಬಗ್ಗೆ ಕೆಟ್ಟ ಕಮೆಂಟ್ಸ್ ಮಾಡಿಸ್ತಾರೆ. ಆದರೆ ಇದರಲ್ಲಿ ಒಂದು ಕೆಲಸವನ್ನು ಕೂಡ ಹನುಮಂತು ಮಾಡಿಲ್ಲ.
ತನ್ನ ಗಟ್ಟಿದನಿಯನ್ನು ಜಗಳಕ್ಕೆ ಮೀಸಲಿಡದೆ ಹಾಡಿನ ಮೂಲಕ ಜೀವನದ ತತ್ವಗಳನ್ನು ಮನೆ ಮನೆಗೂ ತಲುಪಿಸುವ ಕೆಲಸವನ್ನು ಹನುಮಂತು ಮಾಡಿದ್ದಾರೆ, ಇನ್ನು ಟ್ರೋಫಿ ಗೆಲ್ಲುವ ಆಸೆಯಿಂದ ಬಂದವನಲ್ಲ, ಹಾಗೇ ಎಲ್ಲರ ಜೊತೆ ಸ್ವಲ್ಪ ಸಮಯ ಇದ್ದು ಎಂಜಾಯ್ ಮಾಡೋದಕ್ಕೆ ಬಂದಿದ್ದೆ ಎಂದು ಹನುಮಂತು ಸ್ಟೇಜ್ ಮೇಲೆ ಹೇಳಿದ್ದು ಎಲ್ಲರಿಗೂ ಆಶ್ಚರ್ಯ ಆಗಿತ್ತು.
ಪಟ್ಟಣದ ಮುಖವನ್ನು ಕಾಣದ ಹಳ್ಳಿ ಹೈಕಳಿಗೆ ಬಿಗ್ ಕನಸನ್ನು ಕಾಣಲು ಪ್ರೇರಣೆ ನೀಡಿದ. ಅಣ್ಣ ಅಕ್ಕ ದೋಸ್ತ ಮಾವ ಎನ್ನುತ್ತಾ ಮನೆಯವರೆಲ್ಲರಿಗೂ ಹತ್ತಿರವಾದ. ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲಾ ಪ್ರೇಕ್ಷರಿಗೂ ಇಷ್ಟವಾದ. ಕೇವಲ ಜಿಮ್ ಬಾಡಿ ಮಾಡಿಕೊಂಡು ಲವ್ ಅಫೇರ್ ಇಟ್ಕೊಂಡು ಕಂಟೆಂಟ್ ಕೊಟ್ಟರೆ ಷೋ ಗೆದ್ದುಬಿಡಬಹುದು ಎಂಬ ಭ್ರಮೆಯಲ್ಲಿದ್ದ ಸ್ಪರ್ಧಿಗಳಿಗೆ ಇದು ವ್ಯಕ್ತಿತ್ವದ ಆಟ ಎಂದು ಅರ್ಥ ಮಾಡಿಸಿದ. ಹನುಮನಿಗಾಗಿ ಪ್ರತಿದಿನ ಟಿವಿ ಮುಂದೆ ಕೂರುತಿದ್ದ ಕೋಟ್ಯಂತರ ತಂದೆ ತಾಯಿಗಳ ಆಶೀರ್ವಾದ ಪಡೆದು
ಅಧಿಕ ರೇಟಿಂಗ್ ಬರಲು ಕಾರಣವಾದ. ಬಡವರ ಮನೆ ಮಕ್ಕಳು ಬೆಳಿಬೇಕು ಅನ್ನೋ ಮಾತಿಗೆ ಅರ್ಥ ನೀಡಿದ.
ಸಮಾಜದಲ್ಲಿ ಸಮಾನತೆಯನ್ನು ಸಹಿಸದ ಕೆಲವರು ಆತನ ಗೆಲುವನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಅದಕ್ಕೆ ಸಿಂಪತಿಯೆಂಬ ಹಣೆಪಟ್ಟಿ ಕಟ್ಟುತ್ತಿವೆ. ಅವರಿಗೆಲ್ಲಾ ಹೇಳುವುದು ಒಂದೇ ಇದು ಸಿಂಪತಿಯ ಗೆಲುವಲ್ಲ ಸಮಾನತೆಯ ಗೆಲುವು. ಇಂದಿಗೂ ಸಮಾಜದ ಮುನ್ನೆಲೆಗೆ ಬರಲು ಸಾಧ್ಯವಾಗದ ಅದೆಷ್ಟೋ ದಮನಿತರ ಪ್ರತಿನಿಧಿಯಾಗಿ ಆತ ಗೆದ್ದಿದ್ದಾನೆ. ಆತನ ಮುಗ್ಧತೆ, ಹಿಂಜರಿಕೆ, ಸಮಾಜದಲ್ಲಿ ದಮನಿತರ ಪ್ರಸ್ತುತ ಪರಿಸ್ಥಿಯ ಕನ್ನಡಿಯಾಗಿದೆ. ಹನುಮ ಇಂದು ಗೆದ್ದಿರಬಹುದು ಆದರೆ ಹನುಮಂತನಂತಯೇ ಆಗಾಧ ಪ್ರತಿಭೆಯಿದ್ದು ಬೆನ್ನು ತಟ್ಟುವ ಜನರಿಲ್ಲದೇ ಅದೆಷ್ಟು ಅಲೆಮಾರಿಗಳು ಇನ್ನೂ ಕೇವಲ ಕುರಿಕಾಯಲಷ್ಟೇ ಸೀಮಿತವಾಗಿವೆ. ಅವರೆಲ್ಲರಿಗೂ ಹನುಮಂತನ ಗೆಲುವು ಸ್ಪೂರ್ತಿಯಾಗಲಿ ಇನ್ನಷ್ಟು ಹಳ್ಳಿ ಪ್ರತಿಭೆಗಳು ಬೆಳಕಿಗೆ ಬರಲಿ ಎನ್ನೋದು ಎಲ್ಲರ ಆಶಯವಾಗಿದೆ.
– ಅಕ್ಷಯ್ ಕುಮಾರ್ ಕೆ.