ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯ ಮಾಣಿಕ್ ಷಾ ಪರೇಡ್ ಮೈದಾನವು ಇಂದು 77ನೇ ಗಣರಾಜ್ಯೋತ್ಸವದ ಅದ್ದೂರಿ ಆಚರಣೆಗೆ ಸಾಕ್ಷಿಯಾಯಿತು. ಕೇಸರಿ-ಬಿಳಿ-ಹಸಿರು ಬಣ್ಣಗಳಿಂದ ಅಲಂಕೃತಗೊಂಡಿದ್ದ ಮೈದಾನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ಜೀಪ್‌ನಲ್ಲಿ ಪರೇಡ್ ವೀಕ್ಷಣೆ ಮಾಡಿದ ಅವರು, ಪೊಲೀಸ್ ಮತ್ತು ವಿವಿಧ ಸೇನಾಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಗೆ ಶುಭಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಆಶಯಗಳನ್ನು ನೆನಪಿಸಿದರು. “ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ. ಸಾಮಾಜಿಕ ನ್ಯಾಯ ಮತ್ತು ಸಮಸಮಾಜದ ನಿರ್ಮಾಣದ ಮೂಲಕ ಶಕ್ತಿಶಾಲಿ ಕರ್ನಾಟಕವನ್ನು ಕಟ್ಟಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ” ಎಂದು ಅವರು ಕರೆ ನೀಡಿದರು.

ಈ ಬಾರಿಯ ಪರೇಡ್‌ನಲ್ಲಿ ವಿಶೇಷವಾಗಿ ತಮಿಳುನಾಡು ಪೊಲೀಸ್ ಪಡೆ ಭಾಗವಹಿಸಿ ಗಮನ ಸೆಳೆಯಿತು. ಸುಮಾರು 1,100 ಮಂದಿ ಕವಾಯತು ನಡೆಸಿದರೆ, 1,400 ಶಾಲಾ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈದಾನದಲ್ಲಿದ್ದವರ ಮನಸೂರೆಗೊಂಡವು.

ಕಾರ್ಯಕ್ರಮದ ಯಶಸ್ಸಿಗಾಗಿ 2,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು ಮತ್ತು 100ಕ್ಕೂ ಹೆಚ್ಚು ಸಿಸಿಟಿವಿಗಳ ಮೂಲಕ ಕಣ್ಗಾವಲು ಇಡಲಾಗಿತ್ತು.
ಸುಗಮ ಸಂಚಾರಕ್ಕಾಗಿ ಬೆಳಿಗ್ಗೆ 8:30 ರಿಂದ 10:30 ರವರೆಗೆ ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ನಿರ್ಬಂಧ ಹೇರಲಾಗಿತ್ತು.

ಈ ಬಾರಿಯ ಕಾರ್ಯಕ್ರಮದ ವಿಶೇಷವೆಂದರೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ‘ಪರಿವರ್ತನ ಬೇಕರಿ‘ಯಲ್ಲಿ ಖೈದಿಗಳು ತಯಾರಿಸಿದ ಸಿಹಿ ತಿಂಡಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿದರು.




