ಹೊಸದಿಗಂತ ವರದಿ, ಭಾಗಮಂಡಲ(ಕೊಡಗು):
ಭಾರತ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಬಹುತ್ವದ ರಾಷ್ಟ್ರವಾಗಿದ್ದು, ಇದನ್ನು ಒಂದು (ಹಿಂದು) ಧರ್ಮಕ್ಕೆ ಸೇರಿದ ಸಾರ್ವಭೌಮ ರಾಷ್ಟ್ರವನ್ನಾಗಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಬಳಿ, ಮಡಿಕೇರಿ ಮತ್ತು ತಲಕಾವೇರಿ ಹಾಗೂ ನಾಪೋಕ್ಲು –ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸುಮಾರು 30ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಮೇಲ್ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಧರ್ಮಗಳು, ಜನರು, ಜಾತಿಗಳೂ ಕೂಡಾ ಸಮಾನ. ಅದಕ್ಕಾಗಿಯೇ ಸಂವಿಧಾನದಲ್ಲಿ ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಸಾರಲಾಗಿದೆ. ನಮ್ಮ ಧರ್ಮವನ್ನು ಪ್ರೀತಿಸಿ ಗೌರವಿಸಬೇಕು. ಆದರೆ ಇನ್ನೊಂದು ಧರ್ಮವನ್ನು ಅಲ್ಲಗಳೆಯಬಾರದು. ಸಹಿಸ್ಣುತೆ ಇದ್ದಾಗ ಮಾತ್ರ ನಾವು ಮಾನವರಾಗಿ ಬಾಳಲು ಸಾಧ್ಯವಾಗುತ್ತದೆ. ಕುವೆಂಪು ಅವರು ಹುಟ್ಟುವಾಗ ಎಲ್ಲರೂ ವಿಶ್ವ ಮಾನವರಾಗಿರುತ್ತಾರೆ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದು ಹೇಳಿದ್ದರು. ನಾವೆಲ್ಲರೂ ವಿಶ್ವಮಾನವರಾಗುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಕೊಡಗಿನ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಗಾಗಲೇ ಈಡೆರಿಸಿದ್ದು, ಹಿಂದೆ ಬಿಜೆಪಿ ನೂರಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದರೂ, ಅದರ ಶೇ.10ರಷ್ಟನ್ನೂ ಈಡೇರಿಸಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಮೂಲಕ ಬಡವರಿಗೆ ಆರ್ಥಿಕವಾಗಿ ಬಲ ನೀಡಿದ ಸರಕಾರವಾಗಿದ್ದು, ಯಾವ ಸರ್ಕಾರ ನುಡಿದಂತೆ ನಡೆಯುತ್ತದೆ ಎಂಬುದನ್ನು ಜನತೆಯೇ ತೀರ್ಮಾನಿಸಬೇಕು ಎಂದು ನುಡಿದರು.
ಭ್ರಾತೃತ್ವ ಬೆಳೆಸಿ ಭಾರತೀಯರಾಗಿ ಬದುಕಿ:
ಕೊಡಗಿನ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದು, ಯಾವ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಯೋಚಿಸಬೇಕು. ಭಾರತ ದೇಶ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ದ್ವೇಷ ಮಾಡಬಾರದು ಎಂದು ಪರೋಕ್ಷವಾಗಿ ಕೊಡವ-ಗೌಡ ಸಮುದಾಯಗಳ ನಡುವಿನ ಸಂಘರ್ಷವನ್ನು ನೆನಪಿಸಿದ ಅವರು, ದ್ವೇಷ ಮಾಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾದುದು ಎಂದರು.
ನಮ್ಮ ಸರ್ಕಾರ ಸಂವಿಧಾನದ ಆಶಯಗಳನ್ನು ಈಡೇರಿಸುತ್ತಿದೆ. ಪ್ರತಿ ಸರ್ಕಾರವೂ ತನ್ನ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಸಮಾಜವನ್ನು ಒಗ್ಗೂಡಿಸುವುದು ನಮ್ಮ ಕರ್ತವ್ಯ. ಮೂಲತಃ ಮನುಷ್ಯರಾಗಿರುವ ನಾವು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಅಂತಿಮವಾಗಿ ಜಾತಿ ವ್ಯವಸ್ಥೆ ತೊಲಗಿ ಭಾರತೀಯರಾಗಿ ಬದುಕಬೇಕು. ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ ಎಂದರು.
ಕೊಡಗಿನ ಅಭಿವೃದ್ಧಿಗೆ ಅನುದಾನ: ಭಾಗಮಂಡಲ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮವಾಗಿದೆ. ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಕೊಡಗಿನ ಅಭಿವೃದ್ಧಿಗೆ ಅನುದಾನ ನೀಡಿದಂತೆ, ಈ ಬಾರಿಯೂ ಕೊಡಗಿನ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಕೊಡಗಿನ ಜನತೆಯನ್ನು ಇದೇ ಸಂದರ್ಭ ಸಿದ್ದರಾಮಯ್ಯ ಅಭಿನಂದಿಸಿದರು.
ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಫಲಾನುಭವಿಗಳ ಖಾತೆಗೆ ಹಣ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ.ಸಿ ಅಂಡ್ ಡಿ ಭೂಮಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿ, ಅದರ ವರದಿಯಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಸುಗ್ರೀವಾಜ್ಞೆ: ಈ ಭಾಗದ ಜನರು ಮೈಕ್ರೋ ಫೈನಾನ್ಸ್’ಗಳಿಂದ ಅನುಭವಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದರು.