ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್ರಾಜ್ ಮಹಾಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ.ಇದೀಗ ಸ್ಯಾಂಡಲ್ವುಡ್ ಸ್ಟಾರ್ ನಟಿ, ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಿದ್ದಾರೆ.
ಮೊನ್ನೆಯಷ್ಟೇ ಪ್ರಯಾಗ್ರಾಜ್ ಮಹಾ ಕುಂಭಮೇಳದಲ್ಲಿ ಸ್ಯಾಂಡಲ್ವುಡ್ ಸ್ಟಾರ್ಸ್ ಕೂಡ ಭೇಟಿ ಕೊಟ್ಟಿದ್ದರು. ಖ್ಯಾತ ನಿರೂಪಕಿ ಅನುಶ್ರೀ, ಚಾರ್ಲಿ ನಿರ್ದೇಶಕ ಕಿರಣ್ ರಾಜ್, ನಿರ್ದೇಶಕ ರಾಜ್ ಬಿ. ಶೆಟ್ಟಿ ಗೆಳೆಯರ ಜೊತೆ ಪುಣ್ಯಸ್ನಾನ ಮಾಡಿದ್ದರು. ಇದಾದ ಬೆನ್ನಲ್ಲೇ ಕೆಜಿಎಫ್ ಸಿನಿಮಾದ ನಟಿ ಶ್ರೀನಿಧಿ ಶೆಟ್ಟಿ ಕೂಡ ಕುಂಭಮೇಳಕ್ಕೆ ಹೋಗಿದ್ದಾರೆ.
ಕೋಟಿ ಗಟ್ಟಲೆ ಜನರ ಮಧ್ಯೆ ಈ ಬೆಡಗಿ ಮಾಸ್ಕ್ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಜೊತೆಗೆ ತ್ರಿವೇಣಿ ಸಂಗಮದಲ್ಲಿ ಮುಳುಗಿ ಪುನೀತರಾಗಿದ್ದಾರೆ. ಕುಂಭಮೇಳದ ವಿಡಿಯೋವನ್ನ ಸ್ವತಃ ಶ್ರೀನಿಧಿ ಶೆಟ್ಟಿ ಅವರೇ ಹಂಚಿಕೊಂಡಿದ್ದಾರೆ.
ನಾನು ಕುಂಭಮೇಳಕ್ಕೆ ಬರ್ತಿನಿ ಅಂತ ಅಂದುಕೊಂಡಿರಲಿಲ್ಲ. ಇಲ್ಲಿಗೆ ಬಂದ್ಮೇಲೆ ವಿಶೇಷ ಅನುಭವ ಪಡೆಯುತ್ತೇನೆ ಅನ್ನುವ ಫೀಲ್ ಕೂಡ ಇರಲಿಲ್ಲ. ಆದರೆ, ಇಲ್ಲಿಗೆ ಬಂದ್ಮೇಲೆ ಎಲ್ಲವೂ ಸಾಧ್ಯವಾಗಿದೆ. ಮೊನ್ನೆ ಮೌನಿ ಅಮವಾಸ್ಯೆ ದಿನವೇ ಪ್ರಯಾಗ್ ರಾಜ್ಗೆ ಹೋಗಿದ್ದೆ. ನಿಜಕ್ಕೂ ಇದೊಂದು ಒಳ್ಳೆ ಅನುಭವವೇ ಆಗಿದೆ. ಹಾಗೆ ಇಲ್ಲಿಗೆ ಬಂದ ಮೇಲೆ ವಿಶೇಷ ಅನುಭವ ಆಗಿದೆ. ಪವಿತ್ರ ದೈವಿ ಶಕ್ತಿಗಳ ಆಶೀರ್ವಾದಗಳು ಸದಾ ನನ್ನ ಮೇಲೆ ಇದ್ದೇ ಇರುತ್ತದೆ ಅನ್ನುವ ಭಾವನೆ ಕೂಡ ಇದೆ ಎಂದು ಬರೆದುಕೊಂಡಿದ್ದಾರೆ.